ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಸುದ್ದಿಒನ್, ಚಿತ್ರದುರ್ಗ. ನ.21: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಕಲಿಕೆ ಕಠಿಣವಾಗಿರಬಹುದು, ಹೀಗಾಗಿ ಗ್ರಾಮೀಣ ಭಾಗದ ಮಕ್ಕಳ ಇಂಗ್ಲೀಷ್ ಭಾಷಾ ಸುಧಾರಣೆಗೆ ಶಿಕ್ಷಕರು ಪ್ರಯತ್ನಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಆಂಗ್ಲ ಭಾಷಾ ಶಿಕ್ಷಕರ ಕ್ಲಬ್ ಸಂಯುಕ್ತಶ್ರಾಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೋರ್ಡ್ ಪರೀಕ್ಷೆಗಳಲ್ಲಿ ಇಂಗ್ಲೀಷ್ ಭಾಷೆ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಸಾಧನೆ ತೋರುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಮಕ್ಕಳಿಗೆ ಇಂಗ್ಲೀಷ್ ಕಲಿಕೆಯ ಅಗತ್ಯತೆ ಇದೆ. ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಕೂಡ ಸಂಪರ್ಕ ಭಾಷೆಯ ಪ್ರಮುಖ ಕೊಂಡಿಯಾಗಿದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲೀಷ್ ಭಾಷೆಯಲ್ಲಿ ಅಷ್ಟೊಂದು ಹಿಡಿತ ಇರುವುದಿಲ್ಲ. ಇವರ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಪರೀಕ್ಷೆಗೆ ಸನ್ನದ್ಧಗೊಳಿಸಬೇಕು. ಮಕ್ಕಳು ಯಾವ ವಿಷಯ ಕಲಿಕೆಯಲ್ಲಿ ದುರ್ಬಲರಾಗಿದ್ದಾರೋ ಅಂತಹ ವಿಷಯದಲ್ಲಿ ಅವರಿಗೆ ಹೆಚ್ಚಿನ ಬೋಧನೆ ಮಾಡಿ ಶಿಕ್ಷಕರು ಮುಂದೆ ತರಬೇಕು. ಯಾವ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಇರುತ್ತಾದೆಯೋ ಅಂತಹ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ನಾವು ಮಾಡುವಂತಹ ಕ್ಷೇತ್ರದಲ್ಲಿ ಪ್ರಮಾಣಿಕತೆ, ಭಾವನಾತ್ಮಕತೆ ಬೆಳೆಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ ಪ್ರಮುಖವಾಗಿರುತ್ತದೆ. ಉನ್ನತ ವ್ಯಕ್ತಿಗಳನ್ನು ತಯಾರಿಸುವರು ಶಿಕ್ಷಕರು ಮಾತ್ರ. ಶಿಕ್ಷಕರು ಮಕ್ಕಳಿಗೆ ದೊಡ್ಡ ಗುರಿ ಇಟ್ಟುಕೊಳ್ಳುವಂತೆ ಸಲಹೆ ನೀಡಬೇಕು. ಆತ್ಮವಿಶ್ವಾಸ, ದೃಢಮನಸ್ಸು ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಗುಣಾತ್ಮಾಕ ಶಿಕ್ಷಣ ನೀಡುವಂತಹದು ನಮ್ಮ ಜವಾಬ್ದಾರಿಯಾಗಿರುತ್ತದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬದುಕು ಕಟ್ಟಿಕೊಳ್ಳುವ ಕೌಶಲ್ಯ ಬೆಳಸಬೇಕು ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ನಾಗಭೂಷಣ್ ಮಾತನಾಡಿ, ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ಇಂಗ್ಲೀಷ್ ಭಾಷೆಯನ್ನು ಸರಳ ಭಾಷೆಯಾಗಿ ಮಕ್ಕಳಿಗೆ ಹೇಳಬೇಕು. ಆಗ ಮಾತ್ರ ಮಕ್ಕಳು ಇಂಗ್ಲೀಷ್ ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ ಎಂದರು.
ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸ್, ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸೌತ್ ಇಂಡಿಯಾದ ಹಿರಿಯ ಪ್ರಾಧ್ಯಾಪಕ, ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಡಾ. ರವಿನಾರಾಯಣ್ ಚಕ್ರಕೋಡಿ ಅವರು ಆಂಗ್ಲ ಭಾಷೆ ಶಿಕ್ಷಕರುಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಎನ್.ಆರ್. ತಿಪ್ಪೇಸ್ವಾಮಿ, ಮೊಳಕಾಲ್ಮೂರು ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ನಿರ್ಮಲಾ ದೇವಿ, ಆಂಗ್ಲ ಮತ್ತು ಸಮಾಜ ವಿಷಯದ ವಿಷಯ ಪರಿವೀಕ್ಷಕ ಚಂದ್ರಣ್ಣ, ಗಣಿತ ವಿಷಯದ ವಿಷಯ ಪರಿವೀಕ್ಷಕಿ ಸವಿತಾ, ಕನ್ನಡ ಮತ್ತು ಹಿಂದಿ ವಿಷಯದ ವಿಷಯ ಪರಿವೀಕ್ಷಕ ಶಿವಣ್ಣ, ಗುರುಮೂರ್ತಿ ಸೇರಿದಂತೆ ಜಿಲ್ಲೆಯ ಆಂಗ್ಲ ಭಾಷೆ ಶಿಕ್ಷಕರುಗಳು ಇದ್ದರು.