ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.26 : ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಶಂಕರಾಚಾರ್ಯರ ಏಕತಾ ಪ್ರತಿಮೆ ಲೋಕಾರ್ಪಣೆಯಲ್ಲಿ ಭಾಗವಹಿಸಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹ್ಹಾಣ್‍ರವರಿಗೆ ವಿಶೇಷ ಸ್ಮರಣಿಕೆ ನೀಡಿರುವ ಚಿತ್ರದುರ್ಗದ ವಿದ್ವಾನ್ ಗಣಪತಿ ಭಟ್ಟರು, ಸುಬ್ರಾಯಭಟ್ಟರು, ಅನಂತ ಭಟ್ಟರಿಗೆ ನಗರದ ಆನೆಬಾಗಿಲು ಬಳಿಯಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ನಡೆದ ಸಾಮೂಹಿಕ ರುದ್ರಪಾರಾಯಣದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಗಣಪತಿಭಟ್ಟರು ಕಾಳಿದಾಸನಿಗೆ ಮಧ್ಯಪ್ರದೇಶದ ಬಗ್ಗೆ ವಿಶೇಷ ಆಸಕ್ತಿಯಿತ್ತು. ಶಂಕರಾಚಾರ್ಯರ ಏಕತಾ ಪ್ರತಿಮೆ ಲೋಕಾರ್ಪಣೆಗೆ ಮಧ್ಯಪ್ರದೇಶಕ್ಕೆ ಹೋದಾಗ ಸಂಗೀತದ ಮೂಲಕ ನಮ್ಮನ್ನು ಸ್ವಾಗತಿಸಿದರು.
ತಲೆ ಮೇಲೆ ಹೂವು ಹಾಕಿ ಪಾದಮುಟ್ಟಿ ನಮಸ್ಕರಿಸಿ ಆತ್ಮೀಯತೆ ತೋರಿದರು ಸ್ವತಃ ಅಲ್ಲಿನ ಮುಖ್ಯಮಂತ್ರಿಯೆ ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಿ ಸತ್ಕರಿಸಿದರು ಎಂದು ನೆನಪಿಸಿಕೊಂಡು ಸ್ವದೇಶ, ಸ್ವಧರ್ಮ, ಸ್ವಾಭಿಮಾನ ಉಳಿಸಿಕೊಳ್ಳಬೇಕೆನಿಸುತ್ತದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಅನಂತಭಟ್ಟರು ಮಾತನಾಡಿ 108 ಅಡಿ ಎತ್ತರ ಪಂಚಲೋಹದಿಂದ ಶಂಕರಾಚಾರ್ಯರ ಪ್ರತಿಮೆಯನ್ನು ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ ಲೋಕಾರ್ಪಣೆ ಮಾಡಿರುವುದು ನಮಗೆಲ್ಲಾ ಸಂತಸವಾಗಿದೆ. ಇದರಿಂದ ಶಂಕರಾಚಾರ್ಯರ ಜೀವನ ತತ್ವಗಳನ್ನು ಹೇಳುವ ವ್ಯವಸ್ಥೆಯಾಗಿದೆ. ಇದಕ್ಕಾಗಿ 2500 ಕೋಟಿ ರೂ.ಗಳನ್ನು ಇಡಲಾಗಿದೆ. ಕೇವಲ ವೈದಿಕರಲ್ಲ. ಎಲ್ಲಾ ಜಾತಿಯವರು ಹಾಗೂ ಕಲಾವಿದರನ್ನು ಆಹ್ವಾಸಿದ್ದನ್ನು ನೋಡಿದರೆ ಜಾತಿಯತೆಯಿಂದ ಅಲ್ಲಿನ ಸರ್ಕಾರ ದೂರವಿದೆ ಎನ್ನುವುದು ಗೊತ್ತಾಯಿತು ಎಂದರು.
ಪುರೋಹಿತ ಯು.ಎಸ್.ರಮೇಶ್, ನರಸಿಂಹಮೂರ್ತಿ, ಟಿ.ಕೆ.ಶಂಕರ್, ಮಾರುತಿ ಮೋಹನ್, ರಾಜೀವಲೋಚನ, ಟಿ.ಕೆ.ನಾಗರಾಜ್‍ರಾವ್, ಅನಂತಕೃಷ್ಣಜೋಯಿಸ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.