ಜೂನ್ 5 ರಿಂದ ವೃಕ್ಷ ಸಂವರ್ಧನ ಅಭಿಯಾನ :  ಕೆ.ಎಸ್.ನವೀನ್

suddionenews
3 Min Read

ಚಿತ್ರದುರ್ಗ, (ಜೂ.05): ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 05 ರಿಂದ ಜಿಲ್ಲೆಯಲ್ಲಿ ವೃಕ್ಷ ಸಂವರ್ಧನಾ ಅಭಿಯಾನ ಪ್ರಾರಂಭಿಸಲಾಗುವುದು. ಗಣಿಗಾರಿಕೆಯಿಂದ ಹೆಚ್ಚಿನ ಪರಿಸರ ಹಾನಿ ಉಂಟಾಗಿದೆ. ಶೇ.10 ರಷ್ಟು ಡಿ.ಎಂ.ಎಫ್ (ಜಿಲ್ಲಾ ಖನಿಜಾ ಪ್ರತಿಷ್ಠಾನ) ಹಣವನ್ನು ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಮೀಸಲಿರಿಸುವುದು ನ್ಯಾಯಯುತವಾಗಿದೆ. ಈ ಕುರಿತು ಡಿ.ಎಂ.ಎಫ್ ಹಂಚಿಕೆ ಸಮಿತಿ ಎದುರು ಪ್ರಸ್ತಾವನೆ ಸಲ್ಲಿಸುವುದಾಗಿ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಹೇಳಿದರು.

ಚಿತ್ರದುರ್ಗ ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳುತ್ತಿರುವ ವೃಕ್ಷ ಸಂವರ್ಧನಾ ಅಭಿಯಾನದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚು ಮಾಡುವ ಸಂಕಲ್ಪ ಮಾಡಲಾಗಿದೆ. ಮೂರು ವರ್ಷಗಳ ಕಾಲ ವೃಕ್ಷ ಸಂವರ್ಧನಾ ಅಭಿಯಾನ ಮುಂದುವರಿಯಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೇರೆ ಬೇರೆ ರೀತಿಯ ವಾತಾವರಣವಿದೆ. ಮಣ್ಣಿನ ಗುಣ ಬೇರೆಯಿದೆ. ಬಯಲು ಸೀಮೆ ಪ್ರದೇಶಕ್ಕೆ ಹೊಂದಿಕೆಯಾಗುವ ಗಿಡ ಮರಗಳನ್ನು ಬೆಳಸಲು ಕ್ರಮ ಕೈಗೊಳ್ಳಲಾಗವುದು ಎಂದರು.
ಖನಿಜಾ ಪ್ರತಿಷ್ಠಾನ ನಿಧಿಯ ಪೂರ್ಣ ಹಣವನ್ನು ಕಾಂಕ್ರೀಟ್ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಬಳಸುವುದು ಸೂಕ್ತವಲ್ಲ. ಪರಿಸರ ಸಮತೋಲ ಕಾಪಾಡುವ ಕೆಲಸಗಳಿಗೂ ಹಣ ಬಳಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯ ಪಟ್ಟರು.

ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಎಕರೆ ಸಾಮಾಜಿಕ ಅರಣ್ಯ ಅಭಿವೃದ್ಧಿ:
ಜಿಲ್ಲಾ ಪಂಚಾಯತಿ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಕಳೆದ ವರ್ಷ 14 ಲಕ್ಷ ಸಸಿಗಳನ್ನು ನೆಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೂಡ ಸಾಮಾಜಿಕ ಅರಣ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೋಮಾಳ, ಸರ್ಕಾರಿ ಖಾಲಿ ಪ್ರದೇಶಗಳನ್ನು ಗುರುತಿಸಿ, 5 ಎಕರೆ ಸಾಮಾಜಿಕ ಅರಣ್ಯ ಮಾಡುವ ಗುರಿಯನ್ನು ಪ್ರಸಕ್ತ ವರ್ಷ ಹೊಂದಲಾಗಿದೆ. ಗ್ರಾಮ ಪಂಚಾಯತಿವಾರು ಹಸಿರು ಮೌಲ್ಯಮಾಪನ (ಗೀನ್ ಆಡಿಟ್) ನಡೆಸಲಾಗುವುದು. ಉತ್ತಮ ಸಾಧನೆ ತೋರಿದ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ವರ್ಷ ಹೆಚ್ಚಿನ ಅನುದಾನವನ್ನು ಒದಗಿಸಲಾವುದು. ಜಿಲ್ಲೆಯಲ್ಲಿ ಈ ವರ್ಷ ಕನಿಷ್ಠ ಒಂದು ಸಾವಿರ ಎಕರೆ ಸಾಮಾಜಿಕ ಅರಣ್ಯವನ್ನು ಬೆಳಸುವ ವಿಶ್ವಾಸವನ್ನು ಶಾಸಕ ಕೆ.ಎಸ್.ನವೀನ್ ವ್ಯಕ್ತಪಡಿಸಿದರು.
ರೈತ ಸಂತೆ ಆಯೋಜಿಸಿ ಸಸಿಗಳ ವಿತರಣೆ : ರೈತರಿಗೆ ಸಸಿಗಳನ್ನು ವಿತರಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಲ್ಲಿ ರೈತ ಸಂತೆ ಆಯೋಜಿಸಲಾವುದು. ಪಹಣಿ ನೀಡಿ ರೈತರು 400 ಸಸಿಗಳನ್ನು ಪಡೆದುಕೊಳ್ಳಬಹುದು. ವಾಣಿಜ್ಯ ಮೌಲ್ಯ ಇರುವ ಶ್ರೀಗಂಧ, ತೇಗ, ರಕ್ತಚಂದನ ಸೇರಿದಂತೆ ಇತರೆ ಸಸಿಗಳನ್ನು 1 ಹಾಗೂ 3 ರೂಪಾಯಿ ಹಣ ಪಡೆದು ನೀಡಲಾಗುವುದು. ಸಸಿಗಳನ್ನು ಜನತನದಿಂದ ಕಾಪಾಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ದೇವರ ಕಾಡು ಹಾಗೂ ಪವಿತ್ರ ವನ ಬೆಳಸಲು ಚಿಂತನೆ: ಪ್ರಸಿದ್ಧ ದೇವಸ್ಥಾನಗಳು ಇರುವ ಸ್ಥಳಗಳಲ್ಲಿ ದೇವರ ಕಾಡುಗಳನ್ನು ಹಾಗೂ ಮಹಿಳಾ ಸದಸ್ಯರು ಹೆಚ್ಚಿರುವ ಪಂಚಾಯಿತಿಗಳಲ್ಲಿ ಪವಿತ್ರ ವನಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಔಷದ ಹಾಗೂ ಪಾರಂಪರಿಕ ಮಹತ್ವದ 120 ವಿಧದ ಮರ ಗಿಡಗಳನ್ನು ಬೆಳಸಲಾಗುತ್ತಿದೆ.

ಹಿರಿಯೂರು ವಿ.ವಿ.ಸಾಗರದ ಬಳಿಯ ಅರಣ್ಯ ಇಲಾಖೆ ಜಾಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ದೇವರ ಕಾಡು ಬೆಳಸಲಾಗುವುದು. ಆಡುಮಲ್ಲೇಶ್ವರ ಬಳಿ ಖಾಸಗಿಯವರಿಗೆ ನೀಡಿದ 5 ಎಕರೆ ಜಮೀನು ಹಿಂಪಡೆದು ಟ್ರೀ ಪಾರ್ಕ್ ಹಾಗೂ ಟ್ರೀ ಲ್ಯಾಬ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು.

ಜೂನ್ 05 ರಂದು ಬೆಳಿಗ್ಗೆ 8 ಗಂಟೆಗೆ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರ ಸ್ವಾಮಿ ದೇವಸ್ಥಾನದ ಬಳಿ ಪರಿಸರ ದಿನಾಚರಣೆ ಅಂಗವಾಗಿ ದೇವರ ಕಾಡು ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಗತ್ಯಕ್ಕೆ ತಕ್ಕಂತೆ ಪವಿತ್ರ ವನಗಳನ್ನು ನಿರ್ಮಿಸಲಾಗುವುದು ಎಂದರು.

ಬೀಜದ ಹುಂಡೆ ಎರೆಚುವ ಕಾರ್ಯಕ್ರಮಗಳಿಗೆ ಚಾಲನೆ: ಜೂನ್ 5 ರಂದು ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ತಾಲೂಕಿನ ಚಂದ್ರವಳ್ಳಿ, ಜಿ.ಆರ್.ಹಳ್ಳಿ, ಚಳ್ಳಕೆರೆ ತಾಲೂಕಿನ ಸೋಮ್ಲಕೆರೆ ಕಾವಲ್, ನನ್ನಿವಾಳ, ಹಿರಿಯೂರು ತಾಲೂಕಿನ ವದ್ದಿಕೆರೆ, ಇದ್ದಿಲನಾಗೇನಹಳ್ಳಿ,  ಮೊಳಕಾಲ್ಮೂರಿನ ಸೂರಮ್ಮನಹಳ್ಳಿ, ಓಬಯ್ಯನಹಟ್ಟಿ, ತುಮಾಕ್ಲೂರಹಳ್ಳಿ, ಹೊಸದುರ್ಗದ ಎಸ್.ನೇರಲಕೆರೆ, ಅನಿವಾಳ, ಕಾರೆಹಳ್ಳಿ ಹಾಗೂ ಹೊಳಲ್ಕೆರೆ ತಾಲೂಕಿನ ಎ.ಎಮ್.ಕಾವಲ್, ಗಂಗಾ ಸಮುದ್ರ ಹಾಗೂ ಈಚಘಟ್ಟ ಗೋಮಾಳದಲ್ಲಿ ಬೀಜದ ಹುಂಡೆ ಎರೆಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯದಲ್ಲಿ ಶಾಲಾ ಕಾಲೇಜು, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಲಾದ ಸಾಮಾಜಿಕ ಅರಣ್ಯ ಚಟುಟಿಕೆಗಳ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ನಾಯಕ್ ಆರ್ ಪ್ರಾತ್ಯಕ್ಷತೆ ನಡೆಸಿಕೊಟ್ಟರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ,ವಲಯ ಅರಣ್ಯ ಅಧಿಕಾರಿಗಳಾದ ಭರತ್ ರಾಜ್, ಬಾಬು, ನಮಿತ, ಬಹುಗುಣ, ದಯಾನಂದ.ಕೆ, ಮಸ್ತಾನ್.ಯು, ಪರಿಸರವಾದಿಗಳಾದ ಬಾಲಕೃಷ್ಣ, ಶೇಷಣ್ಣ, ಸಿದ್ಧರಾಜ ಜೋಗಿ ಸೇರಿದಂತೆ ಮತ್ತಿತರು ಇದ್ದರು.

 

Share This Article
Leave a Comment

Leave a Reply

Your email address will not be published. Required fields are marked *