ಬೆಂಗಳೂರು: 2023ರ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಜನರ ಬಳಿಗೆ ಹೋಗಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮುನ್ನುಗ್ಗುತ್ತಿದ್ದರೆ, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಮುನ್ನಡೆಯುತ್ತಿದೆ. ಇನ್ನು ಜೆಡಿಎಸ್ ಪಂಚ ರಥಯಾತ್ರೆಯಲ್ಲಿ ಸಾಗುತ್ತಿದೆ.
ಈ ಎಲ್ಲಾ ಪ್ಲ್ಯಾನ್ ಗಳನ್ನು ಮಾಡುತ್ತಿರುವುದು ಚುನಾವಣೆಯ ಪ್ರಚಾರಕ್ಕಾಗಿ. ಜನರಿಗೆ ತಮ್ಮ ಪಕ್ಷದ ಧ್ಯೇಯವನ್ನು ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಅದರಲ್ಲಿ ಸಿದ್ದರಾಮಯ್ಯ ಒಂದು ಕಡೆ ಹಾಗೂ ಡಿಕೆ ಶಿವಕುಮಾರ್ ಮತ್ತೊಂದು ರೂಟ್ ಮೂಲಕ ಪಯಣ ಮಾಡಿ ಜನರನ್ನು ಸೆಳೆಯುವ ಪ್ಲ್ಯಾನ್ ಇದಾಗಿತ್ತು. ಆದ್ರೆ ಹೈಕಮಾಂಡ್ ಕೊಟ್ಟ ಸೂಚನೆ ಮೇರೆಗೆ ಕಾಂಗ್ರೆಸ್ ನಲ್ಲಿ ಪ್ಲ್ಯಾನ್ ಚೇಂಜ್ ಆಗಿದೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮನಸ್ತಾಪಗಳಿದ್ದಾವೆ ಎಂಬುದು ಈಗಾಗಲೇ ಜಗಜ್ಜಾಹೀರಾತಾಗಿರುವ ವಿಚಾರ. ಹೀಗಾಗಿ ಮತ್ತೆ ಜನರಿಗೆ ತಪ್ಪು ಸಂದೇಶ ಹೋಗುವುದು ಬೇಡ ಎಂಬ ಕಾರಣಕ್ಕೆ ಪ್ಲ್ಯಾನ್ ಚೇಂಜ್ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೇರೆ ಬೇರೆಯಾಗಿ ಹೋಗುವುದು ಬೇಡ. ಬದಲಿಗೆ ಇಬ್ಬರು ಒಟ್ಟಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಟ್ಟಿಗೆ ಸೇರಿಯೇ ರಾಜ್ಯ ಸುತ್ತಲಿದ್ದಾರೆ.