ಬೆಂಗಳೂರು: ನಮ್ಮ ಬೇಡಿಕೆ ಈಡೇರದೆ ಇದ್ದರೆ ನಾಳೆ ಎಲ್ಲಾ ಬಸ್ ಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡ್ತೇವೆ ಅಂತ ಸಾರಿಗೆ ಚಾಲಕರು, ಕಂಡಕ್ಟರ್ ಗಳು ನಿರ್ಧಾರವನ್ನ ತೆಗೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಈ ಸಂಬಂಧ ನಡೆದ ಸಭೆಯೂ ವಿಫಲಗೊಂಡಿತ್ತು. ಆದರೆ ಹೈಕೋರ್ಟ್ ಸೂಚನೆ ಮೇರೆಗೆ ಪ್ರತಿಭಟನೆಯನ್ನ ಮುಂದೂಡಿಕೆ ಮಾಡಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆ ಪ್ರಶ್ನಿಸಿ ವಕೀಲ ಎನ್ ಪಿ ಅಮೃತೇಶ್ ಮತ್ತಿತರರಿಂದ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಒಂದು ದಿನದ ಮಟ್ಟಿಗೆ ಮುಷ್ಕರವನ್ನ ಮುಂದೂಡಿಕೆ ಮಾಡುವಂತೆ ತಿಳಿಸಿತ್ತು.
ಈ ಸಂಬಂಧ KSRTC ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹೆಚ್.ವಿ.ಅನಂತ ಸುಬ್ಬರಾವ್ ಮಾತನಾಡಿ, ಆರ್ಡರ್ ಕಾಪಿ ನಮಗೆ ಇನ್ನು ಬಂದಿಲ್ಲ. ಆರ್ಡರ್ ನೋಡಿಕೊಂಡು ನಿರ್ಧಾರ ಮಾಡ್ತೇವೆ. ಹೈಕೋರ್ಟ್ ಗೌರ್ವನರ್ಮೆಂಟ್ ಗೆ ಹೇಳಿದ್ರೆ ಚೆನ್ನಾಗಿರೋದು. ಸೆಟಲ್ ಮಾಡಿ ಅಂತ ಹೇಳಿದ್ರೆ ಚೆನ್ನಾಗಿರೋದು. ನಾವೂ ಪ್ರತಿಭಟನೆ ಮುಂದೂಡಬಹುದು. ಸಿದ್ದರಾಮಯ್ಯ ಅವರೇ ಈ ವಿಚಾರವನ್ನ ಸೆಟಲ್ ಮಾಡಿ ಅಂದಿದ್ರೆ ಚೆನ್ನಾಗಿರೋದು ಎಂದಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಮಾತನಾಡಿ, ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದಿದ್ದರು. ಎರಡರಲ್ಲೂ 14 ಸಂಘ ಸಂಸ್ಥೆಗಳು ಇದಾವೆ. ಅದರ ರೆಪ್ರೆಸೆಂಟೇಟಿವ್ಸ್ ಇವತ್ತು ಬಂದಿದ್ರು. ಸಿಎಂ ಸಭೆಯ ಅಧ್ಯಕ್ಷತೆ ವಹಿಸಿದ್ದರು. 38 ತಿಂಗಳ ಪರಿಷ್ಕೃತ ವೇತನ ಕೊಡಬೇಕೆಂಬ ಡಿಮ್ಯಾಂಡ್ ಅವರದ್ದು. ಕೋವಿಡ್ ಸಮಯದಲ್ಲಿ 9 ಸಾವಿರ ಕೋಟಿ ಹಣ ನೀಡಿದ್ದೆವು. 718 ಕೋಟಿ ಅರಿಯರ್ಸ್ ನೀಡಬೇಕೆಂದು ಹೇಳಿದ್ರು. ಸಾರಿಗೆ ಮುಖಂಡರು ಬಾಕಿ ಹಣ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. 2027ರಲ್ಲಿ ವೇತನ ಪರಿಷ್ಕರಣೆ ಮಾಡ್ತೀವಿ ಅಂತ ಸಿಎಂ ಹೇಳಿದ್ದಾರೆ ಎಂದಿದ್ದಾರೆ.






