ಸುದ್ದಿಒನ್, ಚಿತ್ರದುರ್ಗ, ಜನವರಿ.17 : ಗಣಿ ಅದಿರನ್ನು ಲಾರಿಗಳ ಬದಲು ರೈಲ್ವೆ ವ್ಯಾಗಿನ್‌ಗಳ ಮೂಲಕ ಸಾಗಾಟ ಮಾಡಿದರೆ ಯಾರಿಗೂ ತೊಂದರೆಯಾಗದು ಎಂದು ಖ್ಯಾತ ಮಕ್ಕಳ ತಜ್ಞರು ಡಾ. ಪಿ.ಟಿ. ವಿಜಯಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿರುವ ಡಾ. ಪಿ.ಟಿ. ವಿಜಯಕುಮಾರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮತ್ತೊಮ್ಮೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಅದಿರನ್ನು ರಸ್ತೆ ಮೂಲಕ ಸಾಗಾಟ ಮಾಡುವುದರಿಂದ ಗ್ರಾಮಸ್ಥರ ಆರೋಗ್ಯ ಹಾಗೂ ಪರಿಸರ ಸುಧಾರಣೆಗೆ ಸಾಕಷ್ಟು ತೊಂದರೆಯಾಗುತ್ತದೆ. ಆದ್ದರಿಂದ ಅದಿರನ್ನು ರಸ್ತೆ ಮಾರ್ಗದ ಬದಲಾಗಿ ರೈಲು ಮಾರ್ಗದ ಮುಖಾಂತರ ಸಾಗಾಟ ಮಾಡಿದರೆ ರಸ್ತೆಗಳು ಹಾಳಾಗುವುದಿಲ್ಲ. ಗ್ರಾಮಸ್ಥರ ಆರೋಗ್ಯ ಚೆನ್ನಾಗಿ ಸುಧಾರಿಸಿ ಆಯುಷ್ಯ ಹೆಚ್ಚಾಗುತ್ತದೆ. ರೈತರ ತೋಟ ಮತ್ತು ಬೆಳೆಗಳು ಉಳಿಯಲಿವೆ. ಅಪಘಾತಗಳು ಸಂಭವಿಸುವುದಿಲ್ಲ.
ಈ ಎಲ್ಲಾ ವಿಚಾರಗಳನ್ನು ಅನೇಕ ಬಾರಿ ಪ್ರತಿಭಟನೆ ಮೂಲಕ ಸುದೀರ್ಘ ಮನವಿಯನ್ನು ಸಂಬಂಧಪಟ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಮತ್ತು ಇತರೆ ಅಧಿಕಾರ ವೃಂದದವರು ಮನಸ್ಸು ಮಾಡಿದರೆ ಮತ್ತು ಇಚ್ಛಾಶಕ್ತಿಯಿಂದ ಸಾಮಾನ್ಯ ಪ್ರಜ್ಞೆ ಉಪಯೋಗಿಸಿ ಲಭ್ಯವಿರುವ ಜಿಲ್ಲಾ ಖನಿಜ ನಿಧಿ ಅನುದಾನವನ್ನು ಬಳಸಿಕೊಂಡು ವಿವರವಾದ ಯೋಜನಾ ವರದಿ ಸಿದ್ಧಪಡಿಸಿ ರೈಲ್ವೆ ವ್ಯಾಗಿನ್‌ಗಳ ಮೂಲಕ ಅದಿರು ಸಾಗಾಟ ಮಾಡಲು ಸೂಕ್ತ ಏರ್ಪಾಟು ಮಾಡಿದ್ದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ತಮ್ಮ ಸಾಮಾಜಿಕ ಕಳಕಳಿಯ ಮೂಲಕ
ನೊಂದ ಗ್ರಾಮಸ್ಥರು ಮತ್ತು ಸಾರ್ವಜನಿಕರ ಪರವಾಗಿ ಮನವಿ ಮಾಡಿದ್ದಾರೆ.
ಡಾ. ಪಿ.ಟಿ. ವಿಜಯಕುಮಾರ್
ಹಿರಿಯ ಮತ್ತು ತಜ್ಞರು
ನಿಕಟಪೂರ್ವ ಅಧ್ಯಕ್ಷರು,
ಭಾರತೀಯ ವೈದ್ಯಕೀಯ ಸಂಘ, ಚಿತ್ರದುರ್ಗ ಶಾಖೆ.







