Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಬ್ರಹ್ಮ ಕಮಲ’ ಟ್ರೈಲರ್ ಬಿಡುಗಡೆ : ಶೀಘ್ರದಲ್ಲೇ ಸಿನಿಮಾ ರಿಲೀಸ್

---Advertisement---

ಸುದ್ದಿಒನ್,

ದಾರಿ ಯಾವುದಯ್ಯ ವೈಕುಂಠಕೆ ಚಿತ್ರದ ಮೂಲಕ ತಮ್ಮ ಭಿನ್ನ ನಿರ್ದೇಶನ ಶೈಲಿಯಿಂದ ಗಾಂಧಿನಗರದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ಇದೀಗ ಮತ್ತೊಂದು ಸೂಕ್ಷ್ಮ ಹಾಗೂ ಭಾವನಾತ್ಮಕ ಕಥಾಹಂದರ ಹೊಂದಿರುವ ‘ಬ್ರಹ್ಮ ಕಮಲ’ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಸಿನಿಮಾದ ಅಧಿಕೃತ ಟ್ರೈಲರ್ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಹೆಣ್ಣು ಸಂಸಾರದ ಕಣ್ಣು ಎಂಬುದು ಪ್ರಸಿದ್ಧ ನಾಣ್ಣುಡಿ. ಆದರೆ, ಆ ಕಣ್ಣಲ್ಲಿ ಜಿನುಗುವ ಸುಪ್ತ ನೋವುಗಳನ್ನು ಗ್ರಹಿಸುವ ವ್ಯವಧಾನ ಈ ಸಮಾಜಕ್ಕಿದ್ದಂತಿಲ್ಲ. ಅಂಥಾದ್ದೊಂದು ಸೂಕ್ಷ್ಮ ಕಥನದೊಂದಿಗೆ ಈ ಸಿನಿಮಾವನ್ನು ಸಿದ್ದು ಪೂರ್ಣಚಂದ್ರ ರೂಪಿಸಿದ್ದಾರಂತೆ. ಅದರ ಸೂಕ್ಷ್ಮ ಅಂಶಗಳು ಸದರಿ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿವೆ.ನಮ್ಮಲ್ಲಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಘಟಿಸುವ ಒಂದು ರಾತ್ರಿಯ ಕಥೆ ಬ್ರಹ್ಮಕಮಲವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ.

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು, ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ‘ಬ್ರಹ್ಮ ಕಮಲ’, ಸಾರ್ವಜನಿಕರ ಒತ್ತಾಯದ ಮೇರೆಗೆ ಮೂರು ಬಾರಿ ಪ್ರದರ್ಶನ ಕಾಣುವ ಮೂಲಕ ಗಮನ ಸೆಳೆದಿತ್ತು. ಆ ಮೂಲಕ ಬಿಡುಗಡೆಗೂ ಮುನ್ನವೇ ವಿಮರ್ಶಕರ ವಲಯದಲ್ಲಿ ಭರವಸೆ ಮೂಡಿಸಿದ್ದ ಈ ಚಿತ್ರ, ಈಗ ಟ್ರೈಲರ್ ಮೂಲಕ ಸಮಾಜದ ವಿವಿಧ ಸ್ತರದ ವೀಕ್ಷಕರನ್ನು ತಲುಪುತ್ತಿದೆ.

ಪೂರ್ಣ ಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅದ್ವಿತಿ ಶೆಟ್ಟಿ, ಋತು ಚೈತ್ರ, ಲೋಕೇಂದ್ರ ಸೂರ್ಯ, ಬಾಲ ರಾಜ್ವಾಡಿ, ಮಮತಾ ರಾಹುತ್ ಹಾಗೂ ಪ್ರಮೀಳಾ ಸುಬ್ರಮಣ್ಯ ಮುಂತಾದ ಶ್ರೇಷ್ಠ ಕಲಾವಿದರ ತಾರಾಗಣವಿದೆ.
ಲೋಕೇಂದ್ರ ಸೂರ್ಯ ಅವರ ಛಾಯಾಗ್ರಹಣ, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ ಹಾಗೂ ದೀಪು ಅವರ ಸಂಕಲನ ಚಿತ್ರಕ್ಕಿದೆ. ನಾಗರತ್ನ ಕೆ.ಹೆಚ್ ಅವರ ನಿರ್ಮಾಣ ನಿರ್ವಹಣೆಯಿದ್ದು, ಪುಟ್ಟರಾಜು ಮತ್ತು ಪ್ರಮೀಳಾ ಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಬ್ರಹ್ಮ ಕಮಲ’ ಚಿತ್ರದ ಬೆಳ್ಳಿತೆರೆಯ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now