ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 11 : ನವರಾತ್ರಿ ಹಾಗೂ ದಸರಾ ಹಬ್ಬದ ಪ್ರಯುಕ್ತ ಮನೆ-ಮನಗಳಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಅತ್ಯಂತ ವಿಶೇಷವಾದುದು. ಮನೆಗಳಲ್ಲಿ ಶಾಸ್ತ್ರಕ್ಕೆಂದು ಕೆಲವೇ ಕೆಲವು ಬೊಂಬೆಗಳನ್ನು ಕೂರಿಸಿ ಪೂಜಿಸುವವರು ಹಲವರಾದರೆ, ಪ್ರತಿವರ್ಷವೂ ತಮ್ಮ ಇಡೀ ಮನೆಯನ್ನೇ ಬೊಂಬೆಗಳ ಆಲಯವನ್ನಾಗಿಸಿ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಕೂರಿಸಿ ಪೂಜಿಸುವವರು ಕೆಲವೇ ಕೆಲವರು. ವಿಶೇಷವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ, ದೊಡ್ಡ ಮಹಾನಗರಗಳು ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಅಪರೂಪದ ಸಂಪ್ರದಾಯ ಹೆಚ್ಚಾಗಿ ಕಾಣಸಿಗುತ್ತದೆ. ಇದೀಗ ಐತಿಹಾಸಿಕ ಚಿತ್ರದುರ್ಗ ನಗರದಲ್ಲಿಯೂ ಇಂತಹ ಒಂದು ಅಪೂರ್ವ ಉದಾಹರಣೆ ಕಣ್ಮನ ಸೆಳೆಯುತ್ತಿದ್ದು, ಕೋಟೆನಾಡಿನ ಜನರನ್ನು ಆಕರ್ಷಿಸುತ್ತಿದೆ.
ಮೂರು ದಶಕಗಳ ಭಕ್ತಿ ಜೊತೆಗಿನ ಕಲಾ ಪ್ರೇಮ
ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಶ್ರೀಮತಿ ಎಂ. ಬಿ. ಲಕ್ಷ್ಮೀ ಅವರ ಮನೆಯಲ್ಲಿ ಪ್ರತಿ ವರ್ಷವೂ ದಸರಾ ಹಬ್ಬದ ಪ್ರಯುಕ್ತ ಹತ್ತು ದಿನಗಳ ಕಾಲ ಸಂಭ್ರಮದಿಂದ ಗೊಂಬೆಗಳನ್ನು ಕೂಡಿಸುತ್ತಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಈ ವಿಶಿಷ್ಟ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಹೆಗ್ಗಳಿಕೆಯ ಸಂಗತಿಯಾಗಿದೆ. ಇಲ್ಲಿ ಸಜ್ಜುಗೊಳಿಸಲಾದ ವಿಧವಿಧವಾದ ಗೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ವರ್ಷದಿಂದ ವರ್ಷಕ್ಕೆ ಈ ಸಂಗ್ರಹದಲ್ಲಿ ಗೊಂಬೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದನ್ನು ಕಣ್ತುಂಬಿಕೊಂಡರೆ ಸಾಕ್ಷಾತ್ ಮೈಸೂರಿನಲ್ಲಿರುವ ಗೊಂಬೆ ಮನೆಯನ್ನೇ ನೋಡಿದ ಅನುಭವವಾಗುತ್ತದೆ. ಇಷ್ಟೇ ಅಲ್ಲದೆ, ನವರಾತ್ರಿಯ ದಿನಗಳಲ್ಲಿ ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮಗಳು ನೆರವೇರುತ್ತವೆ ಹಾಗೂ ವಿಧವಿಧವಾದ ರುಚಿಕರ ಪ್ರಸಾದಗಳನ್ನು ದೇವರಿಗೆ ನೈವೇದ್ಯ ಮಾಡಿ, ಬೊಂಬೆಗಳನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಪ್ರೀತಿಯಿಂದ ವಿತರಿಸಲಾಗುತ್ತದೆ.

ಕಣ್ಮನ ಸೆಳೆಯುವ ಬೊಂಬೆಗಳ ಅದ್ಭುತ ಪುಟ್ಟ ಲೋಕ
ದಸರಾ ಹಬ್ಬದ ಈ ಸುಸಂದರ್ಭದಲ್ಲಿ ಸಾರ್ವಜನಿಕರು ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಈ ಸುಂದರ ಗೊಂಬೆ ಮನೆಗೆ ಭೇಟಿ ನೀಡಿ ಬೊಂಬೆಗಳ ಲೋಕವನ್ನೇ ಕಣ್ತುಂಬಿಕೊಳ್ಳಬಹುದು. ಇಲ್ಲಿ ಪ್ರದರ್ಶನಗೊಂಡಿರುವ ಗೊಂಬೆಗಳಲ್ಲಿ ಶ್ರೀ ಮಹಾವಿಷ್ಣುವಿನ ದಶಾವತಾರ ಸೇರಿದಂತೆ ವಿವಿಧ ದೇವಿ-ದೇವರ ಬೊಂಬೆಗಳು, ನಾಡಿನ ಪೂಜ್ಯ ಗುರುಗಳು ಹಾಗೂ ದಾರ್ಶನಿಕರ ಬೊಂಬೆಗಳು ಭಕ್ತಿಭಾವ ಮೂಡಿಸುತ್ತವೆ. ಇದರ ಜೊತೆಗೆ ಕ್ರಿಕೆಟ್ ಮೈದಾನ ಮತ್ತು ಆಟಗಾರರ ಪ್ರತಿಕೃತಿ, ಅಡಿಗೆಮನೆಯ ಸಾಮಾನುಗಳ ಅತ್ಯಂತ ಆಕರ್ಷಣೀಯ ಕಿರು ಪ್ರತಿಕೃತಿಗಳು ಹಾಗೂ ಮೋಟಾರ್ ವಾಹನ ಕಾರುಗಳ ಕಿರು ಮಾದರಿ ಬೊಂಬೆಗಳು ಒಳಗೊಂಡಂತೆ ಮುದ್ದಾದ ಬೊಂಬೆಗಳ ಪುಟಾಣಿ ಲೋಕವೇ ವೀಕ್ಷಕರ ಕಣ್ಣೆದುರಿಗೆ ಅದ್ಭುತವಾಗಿ ಅನಾವರಣಗೊಳ್ಳುತ್ತದೆ. ಅದರಲ್ಲಿಯೂ ವಿಶೇಷವಾಗಿ ಮುದ್ದು ಮಕ್ಕಳಿಗಂತೂ ಇದು ಅತ್ಯಂತ ಆಕರ್ಷಣೀಯ ಹಾಗೂ ಮರೆಯಲಾಗದ ಅನುಭವವನ್ನು ನೀಡುತ್ತದೆ.
ಸಾರ್ವಜನಿಕರು ಹಾಗೂ ವಿಶೇಷವಾಗಿ ಮಕ್ಕಳು ಈ ಸುಂದರ ಬೊಂಬೆಗಳನ್ನು ನೋಡಿ ಆನಂದಿಸಿ, ದೇವರ ಪ್ರಸಾದ ಸ್ವೀಕರಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಜಯದಶಮಿಯ ರಾತ್ರಿಯವರೆಗೂ ಸಾರ್ವಜನಿಕರು ಈ ಗೊಂಬೆಗಳ ಮನೆಗೆ ಆಗಮಿಸಿ, ಬೊಂಬೆಗಳ ಪುಟಾಣಿ ಲೋಕವನ್ನು ಕಣ್ತುಂಬಿಕೊಳ್ಳಲು ಲಕ್ಷ್ಮೀ ಅವರು ಎಲ್ಲರಿಗೂ ಪ್ರೀತಿಯ ಸ್ವಾಗತವನ್ನು ಕೋರುತ್ತಿದ್ದಾರೆ.
ಆಸಕ್ತರು ಶ್ರೀಮತಿ ಎಂ. ಬಿ. ಲಕ್ಷ್ಮೀ, ಪೋಸ್ಟ್ ಭೀಮರಾವ್ ಮನೆ ಕಾಂಪೌಂಡ್, ಮಾರುತಿ ಗ್ಯಾಸ್ ಏಜನ್ಸಿ ಎದುರು, ವಿ. ಪಿ. ಬಡಾವಣೆ, ಚಿತ್ರದುರ್ಗ. ಈ ವಿಳಾಸಕ್ಕೆ ಭೇಟಿ ನೀಡಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844444386 ಅನ್ನು ಸಂಪರ್ಕಿಸಬಹುದು.













