ಧಾರಾಕಾರ ಮಳೆ | ನಾಯಕನಹಟ್ಟಿ ಪೊಲೀಸ್ ಠಾಣೆ ಆವರಣ ಜಲಾವೃತ

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಕಳೆದ ಕೆಲವು ದಿನಗಳಿಂದ ರಾಜ್ಯದೆಲ್ಲೆಡೆ ಜೋರು ಮಳೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೆ ಕೆರೆ ಕಟ್ಟೆಗಳು ಕೋಡಿ ಬಿದ್ದಿವೆ.‌ ಮಳೆಯಿಂದಾಗಿ ನಾನಾ ಅನಾಹುತಗಳು ಸೃಷ್ಟಿಯಾಗಿವೆ. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ನಿಲ್ಲುತ್ತಿಲ್ಲ. ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಜೋರು ಮಳೆಯ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪಟ್ಟಣದ ಪೊಲೀಸ್ ಠಾಣೆಗೂ ನೀರು ನುಗ್ಗಿದೆ. ಇದರಿಂದ ಪೊಲೀಸ್ ಠಾಣೆ ಸಂಪೂರ್ಣ ಜಲವೃತವಾಗಿದೆ. ಓಡಾಡುವುದಕ್ಕೂ ಪೊಲೀಸರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ನೀರು ಹೊರ ಹಾಕುವ ಕಾರ್ಯ ನಡೆಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಪೊಲೀಸ್ ಠಾಣೆ ಆವರಣದಲ್ಲಿ ಈ ಘಟನೆ ನಡೆದಿದೆ. ಆವರಣದಲ್ಲೆಲ್ಲಾ ನೀರು ನಿಂತಿದ್ದು, ನೀರನ್ನು ಹೊರ ಹಾಕಲು
ನಾಯಕನಹಟ್ಟಿ ಪಟ್ಟಣ ಪಂಚಾಯತಿಯ ಸಿಬ್ಬಂದಿಯನ್ನು ಕರೆಸಿದ್ದಾರೆ. ಜೋರು ಮಳೆಯ ಪರಿಣಾಮ ನಿಂತಿರುವ ನೀರನ್ನು ಹೊರ ಹಾಕಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಚರಂಡಿಯ ದುರಸ್ಥಿ ಆಗದೆ ಇರುವುದು. ಮಂಗಳವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ನೀರು ಹರಿಯುವುದಕ್ಕೆ ಚರಂಡಿಯೇ ಸರಿಯಾಗಿಲ್ಲ. ಚರಂಡಿ ಮುಚ್ಚಿ ಹೋಗಿದ್ದು, ನೀರು ಪೊಲೀಸ್ ಠಾಣೆಯ ಆವರಣಕ್ಕೆ ಹರಿದು ಬಂದಿದೆ. ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಹಾರ ಕಾರ್ಯ ನಡೆಸಬೇಕೆಂದು ಸಾರ್ವಜನಿಕರೂ ಮನವಿ ಮಾಡಿದ್ದಾರೆ. ಮಳೆಗಾಲದ ಸಮಯದಲ್ಲಿ ಸ್ಥಳೀಯವಾಗಿ ಏನೆಲ್ಲಾ ಸಮಸ್ಯೆ ಆಗಬಹುದು ಎಂಬುದನ್ನು ಸಂಬಂಧಪಟ್ಟವರು ಅರಿತುಕೊಂಡಿದ್ದರೆ, ಪೊಲೀಸ್ ಠಾಣೆ ಆವರಣಕ್ಕೆ ಈ ರೀತಿಯ ದುಸ್ಥಿತಿ ಬರುತ್ತಿರಲಿಲ್ಲವೇನೋ.

Share This Article
Leave a Comment

Leave a Reply

Your email address will not be published. Required fields are marked *