ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ.ವಿರುದ್ದ ಜನ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕಲು ಜನ ಸಿದ್ದರಿದ್ದಾರೆ. ಕಾರ್ಯಕರ್ತರು, ಮುಖಂಡರುಗಳು ಪಕ್ಷ ಅಧಿಕಾರಕ್ಕೆ ತರುವಲ್ಲಿ ಸಂಘಟಿತರಾಗಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಕಾಂಗ್ರೆಸ್ ಯುವ ನೇತಾರ ರಾಹುಲ್‍ಗಾಂಧಿ ಆ.3 ರಂದು ಚಿತ್ರದುರ್ಗದ ಮುರುಘಾಮಠಕ್ಕೆ ಆಗಮಿಸುತ್ತಿರುವುದರಿಂದ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೀಬಾರದ ಸಮೀಪವಿರುವ ಎಸ್.ನಿಜಲಿಂಗಪ್ಪನವರ ಸ್ಮಾರಕದ ಬಳಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ರಾಷ್ಟ್ರಧ್ವಜ ನೀಡಿದ್ದು ಕಾಂಗ್ರೆಸ್ ಹಾಗಾಗಿ ತ್ರಿವರ್ಣ ಧ್ವಜ ಹಿಡಿಯಬೇಕಾದವರು ನೀವುಗಳು. ಮೇಕೆದಾಟು ಪಾದಯಾತ್ರೆಯನ್ನು ಮೀರಿಸುವ ರೀತಿಯಲ್ಲಿ ಆ.15 ರಂದು ಬೆಂಗಳೂರಿನಲ್ಲಿ ನಡೆಯುವ ಅಮೃತ ಮಹೋತ್ಸವ ಪಾದಯಾತ್ರೆ ಯಶಸ್ವಿಗೊಳಿಸಬೇಕು. ದೇಶ ನಮ್ಮ ಕಡೆ ನೋಡುವ ರೀತಿಯಲ್ಲಿ ಪಾದಯಾತ್ರೆ ನಡೆಯಬೇಕಾಗಿರುವುದರಿಂದ ಪ್ರತಿ ಜಿಲ್ಲೆಯಿಂದ ಸಹಸ್ರಾರು ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಮೃತ ಮಹೋತ್ಸವ ಪಾದಯಾತ್ರೆ ಇಡಿ ದೇಶದಲ್ಲಿ ನಡೆಯಬೇಕು ಎಂದು ಎ.ಐ.ಸಿ.ಸಿ.ಕರೆ ಕೊಟ್ಟ ಮೇಲೆ ಬಿಜೆಪಿ.ಯವರು ಪ್ರತಿ ಮನೆ ಮನೆಗಳ ಮೇಲೆ ತಿರಂಗಾ ಧ್ವಜ ಹಾರಬೇಕು ಎಂದು ಹೇಳಿದ್ದಾರೆ.
ಅದಕ್ಕೆ ನಮ್ಮ ತಕರಾರಿಲ್ಲ. ಆ.3 ರಂದು ಚಿತ್ರದುರ್ಗಕ್ಕೆ ರಾಹುಲ್‍ಗಾಂಧಿ ಆಗಮಿಸಿ ಮುರುಘಾಮಠದ ಶರಣರ ಆಶೀರ್ವಾದ ಪಡೆದು ಸಂವಾದ ನಡೆಸಿ ನಂತರ ದಾವಣೆಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮವೂ ಕೂಡ ಜಿಲ್ಲೆಯಲ್ಲಿ ನಡೆಯುತ್ತದೆ. ಪಾದಯಾತ್ರೆಯಲ್ಲಿ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಳ್ಳಿ. ಹಾಲು ಮೊಸರು, ಮಜ್ಜಿಗೆ ಮೇಲೆ ಜಿ.ಎಸ್.ಟಿ.ಹಾಕಿರುವ ದೇಶದ ಪ್ರಧಾನಿ ನರೇಂದ್ರಮೋದಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರು ತತ್ತರಿಸುವಂತೆ ಮಾಡಿರುವುದನ್ನು ಕರ ಪತ್ರದಲ್ಲಿ ಮುದ್ರಿಸಿ ಪಾದಯಾತ್ರೆಯಲ್ಲಿ ಜನರಿಗೆ ಮುಟ್ಟಿಸಿ ಜಾಗೃತರನ್ನಾಗಿಸಿ ಎಂದು ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ದೇಶದ ಹುಟ್ಟುಹಬ್ಬ ಅಮೃತ ಮಹೋತ್ಸವದಲ್ಲಿ ಕೇವಲ ಕಾಂಗ್ರೆಸ್‍ನವರಷ್ಟೆ ಅಲ್ಲ. ಪಕ್ಷಾತೀತವಾಗಿ ವಿವಿಧ ಸಂಘಟನೆಗಳವರು, ವರ್ತಕರು, ಸ್ತ್ರೀಶಕ್ತಿ ಸ್ವಸಹಾಯ ಸಂಘದವರು ವಿದ್ಯಾರ್ಥಿಗಳ ಕರೆತನ್ನಿ. ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿಯೂ ಲಕ್ಷಾಂತರ ಜನ ಪಾಲ್ಗೊಳ್ಳಬೇಕು. ಪಾದಯಾತ್ರೆಯಲ್ಲಿ ನೀರಾವರಿ ರೈತರ ಸಮಸ್ಯೆಗಳನ್ನು ಆಲಿಸಿ. ಭಾರತವನ್ನು ಒಂದು ಮಾಡಬೇಕಾಗಿರುವುದರಿಂದ ನಮ್ಮ ನಾಯಕರುಗಳು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮುಂದಿಟ್ಟುಕೊಂಡು ಹೊರಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳಲ್ಲಿಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾವುಟ ಹಾರಬೇಕು. ಅಧಿಕಾರ ಮನೆ ಬಾಗಿಲಿಗೆ ಬರುತ್ತಿದೆ. ಕೈಕಟ್ಟಿ ಕುಳಿತುಕೊಳ್ಳಬೇಡಿ. ಆ.15 ರಂದು ಬೆಂಗಳೂರಿನಲ್ಲಿ ನಡೆಯುವ ಅಮೃತ ಮಹೋತ್ಸವ ಪಾದಯಾತ್ರೆಗೆ ಜಿಲ್ಲೆಯಲ್ಲಿ ಒಂದೊಂದು ಬೂತ್‍ನಿಂದ ನೂರುಜನ ಬಂದು ರಾಷ್ಟ್ರಧ್ವಜ ಹಿಡಿದು ಶಕ್ತಿ ಪ್ರದರ್ಶಿಸಿ ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ವಿನಂತಿಸಿದರು.
ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ. ಅನೇಕ ಹಿರಿಯರು ಬ್ರಿಟೀಷರ ವಿರುದ್ದ ಹೋರಾಡಿ ಹುತಾತ್ಮರಾಗಿದ್ದಾರೆ. ಲಾಠಿ ಏಟು ತಿಂದು ಜೈಲು ಸೇರಿದವರು ಲೆಕ್ಕಕ್ಕಿಲ್ಲ. ತ್ಯಾಗ ಬಲಿದಾನವಿದೆ. ಜಲಿಯನ್‍ವಾಲಬಾಗ್‍ನಲ್ಲಿ ನೂರಾರು ಜನ ಗುಂಡಿಗೆ ಬಲಿಯಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಕಾಂಗ್ರೆಸ್. ಸೂಜಿಯಿಂದ ಹಿಡಿದು ನ್ಯೂಕ್ಲಿಯರ್ ಬಾಂಬ್‍ವರೆಗೆ ಕಾಂಗ್ರೆಸ್ ಕಂಡು ಹಿಡಿದಿದೆ. ನಕಲಿ ರಾಷ್ಟ್ರೀಯವಾದಿಗಳು ಕಾಂಗ್ರೆಸ್ ನಾಯಕರುಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯುವಕ/ಯುವತಿಯರಿಗೆ ಕಾಂಗ್ರೆಸ್‍ನ ಇತಿಹಾಸವನ್ನು ಅಮೃತ ಮಹೋತ್ಸವ ಪಾದಯಾತ್ರೆಯಲ್ಲಿ ತಿಳಿಸಿ ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಕರೆ ನೀಡಿದರು.
ಜಾತಿ-ಧರ್ಮಗಳ ನಡುವೆ ಗಲಭೆ ಸೃಷ್ಟಿಸುತ್ತಿರುವ ಬಿಜೆಪಿ.ಯವರು ಕೋಮು ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ದೇಶದಲ್ಲಿ ಬ್ರಹ್ಮಾಂಢ ಭ್ರಷ್ಟಾಚಾರ ನಡೆಯುತ್ತಿದೆ. ಆ.15 ರಂದು ಬೆಂಗಳೂರಿನಲ್ಲಿ ನಡೆಯುವ ಅಮೃತ ಮಹೋತ್ಸವ ಪಾದಯಾತ್ರೆಯಲ್ಲಿ ಎರಡು ಲಕ್ಷ ಜನರನ್ನು ಸೇರಿಸುವ ಗುರಿಯಿದೆ. ಎಲ್ಲರೂ ಅಂದು ರಾಷ್ಟ್ರಧ್ವಜ ಹಿಡಿದು ಸಾಗಬೇಕು. ಆ.3 ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿ ಭಾಗವಹಿಸಲು ರಾಹುಲ್‍ಗಾಂಧಿ ಚಿತ್ರದುರ್ಗಕ್ಕೆ ಆಗಮಿಸುತ್ತಿರುವುದರಿಂದ ಎಲ್ಲರೂ ಶಿಸ್ತಿನಿಂದ ವರ್ತಿಸಿ ಎಂದು ಕೋರಿದರು.
ಮಾಜಿ ಸಚಿವ ಹೆಚ್.ಆಂಜನೇಯ, ಕೆ.ಪಿ.ಸಿ.ಸಿ.ವಕ್ತಾರ ಮುರಳಿಧರ ಹಾಲಪ್ಪ, ಶಾಸಕ ಟಿ.ರಘುಮೂರ್ತಿ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಹನುಮಲಿ ಷಣ್ಮುಖಪ್ಪ ಇವರುಗಳು ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನಮಂತಪ್ಪ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಂ.ಸಿ.ವೇಣುಗೋಪಾಲ್, ಮಾಜಿ ಸಚಿವರುಗಳಾದ ಕೆ.ಶಿವಮೂರ್ತಿನಾಯ್ಕ, ಡಿ.ಸುಧಾಕರ್, ಮಾಜಿ ಶಾಸಕರುಗಳಾದ ಎ.ವಿ.ಉಮಾಪತಿ, ಎಸ್.ತಿಪ್ಪೇಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ನಿಖಿಲ್‍ರಾಜು, ಪಾಲಯ್ಯ, ಕೆ.ಪಿ.ಸಿ.ಸಿ.ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳಾದ ಬಿ.ಯೋಗೇಶ್‍ಬಾಬು, ಸವಿತರಘು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಯಣ್ಣ ಮೊಗಲಹಳ್ಳಿ, ಮುಖೇಶ್‍ರಾಜ್ ಮಯೂರ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಪಿ.ನಾಗೇಶ್‍ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೈಯದ್ ಸಾಧಿಕ್ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.