ಸುದ್ದಿಒನ್, ಚಿತ್ರದುರ್ಗ : ಮತದಾನ ಮಾಡಲು ಮತದಾರನು ಎಪಿಕ್ (ಆಧಾರ್) ಕಾರ್ಡ್ ಇಲ್ಲವೆಂದು ಚಿಂತಿಸಬೇಕಿಲ್ಲಾ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಚುನಾವಣಾ ಆಯೋಗವು ಎಪಿಕ್ ಕಾರ್ಡ್ ಹೊರತುಪಡಿಸಿ 12 ಅನುಮೋದಿತ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಿ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ಮತದಾರನು ಎಪಿಕ್ ಇಲ್ಲದೇ ಹೋದಲ್ಲಿ ಅದರ ಬದಲಾಗಿ ಆಧಾರ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ಅಂಚೆ ಕಛೇರಿಯ ಭಾವಚಿತ್ರವುಳ್ಳ ಪಾಸ್‌ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮಾ ಕಾರ್ಡ್, ಚಾಲನಾ ಪರವಾನಗಿ, ವಿಶೇ಼ಷ ಚೇತನರ ಗುರುತಿನ ಚೀಟಿ, ಪಾನ್ ಕಾರ್ಡ್, ಎನ್.ಪಿ.ಆರ್ ಅಡಿಯಲ್ಲಿ ಆರ್.ಜಿ.ಐ ನ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ದಾಖಲೆ, ಸೇವಾ ಗುರುತಿನ ಚೀಟಿ ಹಾಗೂ ಎಂಪಿ, ಎಂಎಲ್‌ಎ ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಬಳಸಿ ಮತದಾನ ಚಲಾಯಿಸಬಹುದು ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.