ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ.
ಚಿತ್ರದುರ್ಗ ನಗರದ ವಿಪಿ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಮತದಾರರು ಸಾಲುಗಟ್ಟಿ ನಿಂತಿರುವ ದೃಶ್ಯ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬೆಳಗ್ಗೆ ಏಳು ಗಂಟೆಗೆ ಮತದಾರರು ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಸಿರಾ ಮತ್ತು ಪಾವಗಡ ಕ್ಷೇತ್ರಗಳಲ್ಲಿನ ವಿವಿಧ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಯುವಕರು, ಮಹಿಳೆಯರು, ಹಿರಿಯ ನಾಗರೀಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಮತದಾನ ಮಾಡಲು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಡಿಎ ಮೈತ್ರಿ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ ಎನ್. ಚಂದ್ರಪ್ಪ ಹಾಗೂ ಎನ್ ಡಿ ಎ ಮೈತ್ರಿ ಗೋವಿಂದ ಕಾರಜೋಳ ಅವರು ಅಖಾಡದಲ್ಲಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ 18,56,876 ಮತದಾರರಿದ್ದು, ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ಮತದಾರರು ಮತದಾನ ಕೇಂದ್ರಕ್ಕೆ ಆಗಮಿಸಿ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡರು.