ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು ಶ್ರಮ ಹಾಕಿದರು. ಪ್ರಚಾರವನ್ನು ಮಾಡಿದರು. ರೆಡ್ಡಿಗೆ ಬಳ್ಳಾರಿ ಪ್ರವೇಶದ ಅನುಮತಿ ಸಿಕ್ಕ ಮೇಲೆ ಸಂಡೂರು ಕ್ಷೇತ್ರ ಮೊದಲ ಚುನಾವಣೆಯಾಗಿತ್ತು. ರೆಡ್ಡಿ ಅವರು ತಮ್ಮ ಪ್ತಭಾವ ತೋರಿಸುವುದಕ್ಕೂ ಇದು ಮುಖ್ಯವಾಗಿತ್ತು. ಗೆಲ್ಲಿಸಿಕೊಂಡು ಬಂದೇ ಬರುತ್ತೀವಿ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಜನಾರ್ದನ ರೆಡ್ಡಿ ಅವರಿಗೆ ಇದೀಗ ಸೋಲಾಗಿದೆ. ಬಂಗಾರು ಹನುಮಂತು ಸೋಲು ಕಂಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಸೋಲನ್ನ ನಾವೂ ಒಪ್ಪಿಕೊಳ್ಳಲೇಬೇಕು. ಈ ರೀತಿಯ ಸೋಲಾಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಸಂಡೂರಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತೆ ಎಂಬ ವಾತಾವರಣ ಇದೆ ಎಂದು ಗೊತ್ತಾದ ಕೂಡಲೇ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಬಂದು, ಪಂಚಾಯ್ತಿ ಮಟ್ಟದಲ್ಲಿ ಪ್ರಚಾರ ಮಾಡಿದರು.
100 ಕೋಟಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ. ಪೊಲೀಸರು, ಸರ್ಕಲ್ ಇನ್ಸ್‌ಪೆಕ್ಟರ್ ಗಳು ಜನರನ್ನು ಹೆದರಿಸಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಎಲ್ಲಾ ರೀತಿಯ ದುರುಪಯೋಗ ಪಡಿಸಿಕೊಂಡರು ಸಹ ಬಂಗಾರು ಹನುಮಂತು ಅವರಿಗೆ 80 ಸಾವಿರದ ಹತ್ತಿರತ್ತಿರ ಮತ ಪಡೆದಿದ್ದಾರೆ. ಇದಕ್ಕೆ ಸಂಡೂರು ಕ್ಷೇತ್ರದ ಜನತೆಗೆ ಧನ್ಯವಾದ ಹೇಳುತ್ತೇವೆ. ಮುಂದಿನ ಚುನಾವಣೆಗಳಲ್ಲಿ ಇಡೀ ಬಳ್ಳಾರಿ ಜನರ ಜೊತೆಗೆ ನಾವಿರುತ್ತೇವೆ. ಗೆಲ್ಲುತ್ತೇವೆ ಎಂದಿದ್ದಾರೆ.