ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ಹಿರಿಯ ನಟ ಕೆ ಶಿವರಾಮ್ ಅವರಿಗೆ ಹೃದಯಾಘಾತವಾಗಿದೆ.
ಸದ್ಯ ಅವರಿಗೆ ಬೆಂಗಳೂರಿನ ಎಚ್ ಸಿ ಜಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವರಾಮ್ ಅವರ ಮೆದುಳು ಕೂಡ ನಿಶ್ಕ್ರೀಯವಾಗಿದೆ ಎನ್ನಲಾಗಿದೆ. ಹೀಗಾಗಿ ಐಸಿಯುನಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಕಳೆದ 20 ದಿನಗಳ ಹಿಂದೆಯೇ ಶಿವರಾಮ್ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿತ್ತಂತೆ. ಹೀಗಾಗಿಯೇ ಅವರನ್ನು ಆಸ್ಪತ್ರೆಗೆ ಅಂದೇ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರಂತೆ. ಆದರೆ ಇಂದು ಹೃದಯಾಘಾತವಾಗಿದೆ ಎಂದು ಶಿವರಾಮ್ ಅವರ ಅಳಿಯ ಭರತ್ ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯದ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಬಹು ಅಂಗಾಂಗ ವೈಫಲ್ಯ ಹಾಗೂ ಹಾರ್ಟ್ ಅಟ್ಯಾಕ್ ಆಗಿದೆ ಎಂದಿದ್ದಾರೆ. ಡಾ.ಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವರಾಮ್ ಅವರ ಚಿಕಿತ್ಸೆ ಬಗ್ಗೆ ರಾಜ್ಯ ಸರ್ಕಾರ ಈ ಕಡೆ ಗಮನ ಹರಿಸಬೇಕು ಎಂದು ಶಿವರಾಮ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇನ್ನು ಕೆ ಶಿವರಾಮ್ ಅವರಿಗೆ 71 ವರ್ಷವಾಗಿತ್ತು. ಕೆ.ಶಿವರಾಮ್ ಅವರು, ʻವಸಂತಕಾವ್ಯ’, ‘ಖಳನಾಯಕ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ನಾಗ’, ‘ಓ ಪ್ರೇಮ ದೇವತೆ ಚಿತ್ರದಲ್ಲಿ ನಟಿಸಿದ್ದಾರೆ. 2007ರಲ್ಲಿ ಬಿಡುಗಡೆ ಆದ ‘ಟೈಗರ್’ ಚಿತ್ರದ ನಂತರ ಬಣ್ಣದ ಲೋಕದಿಂದ ಅಂತರ ಕಾಪಾಡಿಕೊಂಡಿದ್ದರು ಕೆ.ಶಿವರಾಮ್. ಅವರ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ.