ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಡಿ.14 ರಂದು ವೀರವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಗುವುದೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಆಯೋಗದ ಅಧ್ಯಕ್ಷ ನೆಹರು ಚ.ಓಲೇಕಾರ್ ತಿಳಿಸಿದರು.
ಒನಕೆ ಓಬವ್ವ ಜಯಂತಿಗೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಸಿದ್ದತೆಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ನೆಹರು ಚ.ಓಲೇಕಾರ್ ಕೆಚ್ಚೆದೆಯ ವೀರವನಿತೆ ಒನಕೆ ಓಬವ್ವ ಶತ್ರುಗಳನ್ನು ಸದೆಬಡಿದು ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಇತಿಹಾಸ ನಿರ್ಮಿಸಿರುವುದನ್ನು ಯಾರು ಮರೆಯುವಂತಿಲ್ಲ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 2021 ರಲ್ಲಿ ಒನಕೆ ಓಬವ್ವ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದಾಗಿ ಘೋಷಿಸಿದರು.
ಹಾಗಾಗಿ ಅಂದು ಮಧ್ಯಾಹ್ನ ಒಂದು ಗಂಟೆಗೆ ಮುಖ್ಯಮಂತ್ರಿ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಲಿದ್ದಾರೆ. ಛಲವಾದಿ ಸಮಾಜದವರು, ಒನಕೆ ಓಬವ್ವಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ರಾಜ್ಯದ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಒನಕೆ ಓಬವ್ವ ಜಯಂತಿ ಆಚರಿಸಲು ತೀರ್ಮಾನಿಸಿದ್ದು, ಡಿ.14 ರಂದು ಬೆಳಿಗ್ಗೆ 9 ಕ್ಕೆ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ಮೆರವಣಿಗೆ ಹೊರಟು ಒನಕೆ ಓಬವ್ವ ಪ್ರತಿಮೆಗೆ ಬಳಿ ಆಗಮಿಸಿ ಹೂಮಾಲೆ ಅರ್ಪಿಸಲಿದೆ. ನಂತರ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಜವೀರಮದಕರಿನಾಯಕನ ಪ್ರತಿಮೆಗೂ ಮಾಲಾರ್ಪಣೆ ಮಾಡಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ತಲುಪಲಿದೆ ಎಂದರು.
ಒನಕೆ ಓಬವ್ವ ಉತ್ಸವ ಸಮಿತಿ ಅಧ್ಯಕ್ಷ ರುದ್ರಮುನಿ, ಕಾರ್ಯಾಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಉಪಾಧ್ಯಕ್ಷರುಗಳಾದ ಗುರುಮೂರ್ತಿ, ದಯಾನಂದ್, ಕಾರ್ಯದರ್ಶಿಗಳಾದ ತಿಪ್ಪೇಸ್ವಾಮಿ, ನೆಲ್ಲಿಕಟ್ಟೆ ನಾಗರಾಜ್, ಚನ್ನಗಿರಿ ನಾಗರಾಜ್, ರಾಮಕೃಷ್ಣ, ಗೌರಣ್ಣ, ಸುವರ್ಣಮ್ಮ, ಭಾರ್ಗವಿ ದ್ರಾವಿಡ್, ಚಲವಾದಿ ಕುಮಾರ್, ಮುರಾರಿ, ಕೆಂಚಪ್ಪ, ರವಿಕುಮಾರ್ ಸೇರಿದಂತೆ ಚಲವಾದಿ ಜನಾಂಗದ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.