ಚಿತ್ರದುರ್ಗ,(ಜೂನ್.26) : ಇದೇ ಜೂನ್ 27 ರಿಂದ ಧಾರವಾಡ ಹಾಗೂ ಬೆಂಗಳೂರಿನ ನಡುವೆ ಕಾರ್ಯಾರಂಭ ಮಾಡಲಿರುವ ಬಹು ನಿರೀಕ್ಷಿತ “ವಂದೇ ಭಾರತ್ ರೈಲು” ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ನಿಲುಗಡೆ ಹೊಂದಲು ರೈಲ್ವೇ ಸಚಿವಾಲಯ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಖುದ್ದು ರೈಲ್ವೇ ಸಚಿವಾಲಯವನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಂದೇ ಭಾರತ್ ರೈಲು ಚಿಕ್ಕಜಾಜೂರಿನಲ್ಲಿ ಒಂದು ನಿಲುಗಡೆಗೆ ನೀಡುವಂತೆ ಕೋರಿದರು.
ಇದಕ್ಕೆ ಸಕಾರಾತ್ಮವಾಗಿ ಸ್ಟಂದಿಸಿದ ರೈಲ್ವೇ ಸಚಿವಾಲಯ ನಿಲುಗಡೆ ಅನುಮತಿ ಆದೇಶಿಸಿದೆ. ರಾಜ್ಯದ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿ, ಸಚಿವರು ಶುಭ ಹಾರೈಸಿ, ಅಭಿನಂದಿಸಿದ್ದಾರೆ.
ಧಾರವಾಡ-ಕೆಎಸ್‌ಆರ್ ಬೆಂಗಳೂರು ನಗರಗಳ ನಡುವಿನ ಗಾಡಿಯು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ಓಡಾಡುವ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಲಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಯಶವಂತಪುರ, ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.
ಉದ್ಘಾಟನಾ ವಿಶೇಷ ರೈಲು ಗಾಡಿಯು 27.06.2023 ರಂದು ಬೆಳಗ್ಗೆ ಸುಮಾರು 10:35 ಗಂಟೆಗೆ ಧಾರವಾಡ ರೈಲು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತಿಪಟೂರು, ಅಮ್ಮಸಂದ್ರ, ತುಮಕೂರು, ದೊಡ್ಡಬೆಲೆ, ಚಿಕ್ಕಬಾಣಾವರ ಮತ್ತು ಯಶವಂತಪುರ ಜಂ. ಮಾರ್ಗವಾಗಿ ಜೊತೆಯಲ್ಲಿ ಲಗತ್ತಿಸಲಾದ ವೇಳಾಪಟ್ಟಿಯ ಪ್ರಕಾರ ಚಲಿಸಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ ಎಂದು ಜೆ.ಲೋಹಿತೇಶ್ವರ,
ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ, ಮೈಸೂರು ವಿಭಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.