ಚಿತ್ರದುರ್ಗ, (ಫೆ.08) : ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ತರ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರ ಸರ್ಕಾರ ಮುಂದಾಗಿರುವಾಗ ಆಂಧ್ರ ಪ್ರದೇಶದ ಸರ್ಕಾರ ಕ್ಯಾತೆ ತೆಗೆದಿರುವುದನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಚಾವತ್ ಹೈ ತೀರ್ಪು ಹಾಗೂ ನ್ಯಾಯಾಧೀಕರಣ ಅನ್ವಯ ಲಭ್ಯವಾದ 29,9 ಟಿ.ಎಂ.ಸಿ. ನೀರನ್ನು ಬಳಕೆ ಮಾಡಿಕೊಂಡು, ಭದ್ರಾ ಮೇಲ್ದಂಡೆ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಿಯೂ ಕೂಡ ಆಂಧ್ರ ಪ್ರದೇಶ ಒಳಗೊಂಡಂತೆ ಬೇರೆ ರಾಜ್ಯದ ಪಾಲಿನ ನೀರನ್ನು ಕಬಳಿಸುವ ಪ್ರಶ್ನೆಯೇ ಉದ್ಭವವಾಗಿರುವುದಿಲ್ಲ ದಿ:15-02-2022 ರಂದು ನಡೆದ ಕೇಂದ್ರ ಸರ್ಕಾರದ ಹೈ ಪವರ್ ಸ್ಟಿರಿಂಗ್ ಕಮಿಟಿ ಸಭೆಯಲ್ಲಿಯೇ ಆಂಧ್ರ ಪ್ರದೇಶ ಎತ್ತಿದ ಆಕ್ಷೇಪಣೆಗಳನ್ನು ಕರ್ನಾಟಕ ಸರ್ಕಾರ ನಿವಾರಣೆ ಮಾಡಿದ ನಂತರವೇ ರಾಷ್ಟ್ರೀಯ ಯೋಜನೆ ಘೋಷಣೆಯ ಪ್ರಸ್ತಾಪಗಳನ್ನು ಕೇಂದ್ರ ಸಂಪುಟದ ಮುಂದೆ ಮಂಡಿಸಲಾಗಿತ್ತು.
ರಾಷ್ಟ್ರೀಯ ಯೋಜನೆ ಘೋಷಣೆ ಪ್ರಸ್ತಾಪಗಳು ಕದ್ದು ಮುಚ್ಚಿ ಮಾಡಲು ಬರುವುದಿಲ್ಲ. ಕೇಂದ್ರ ಜಲಶಕ್ತಿ ಮಂತ್ರಾಲಯ ಈ ಸಂಬಂಧ ಹಲವಾರು ಸಭೆಗಳನ್ನು ನಡೆಸಿ ಅಂತಿಮವಾಗಿ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಿದೆ. ಪ್ರತಿ ಹಂತದ ನಡಾವಳಿಗಳನ್ನು ಮಾಧ್ಯಮಗಳ ಮೂಲಕ ಪ್ರಚಾರಪಡಿಸಲಾಗಿದೆ.
ಫೆಬ್ರವರಿ 01-2023 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂಗಳ ಅನುದಾನ ಘೋಷಣೆ ಮಾಡಲಾಗಿತ್ತು. 22 ಸಾವಿರ ಕೋಟಿ ರೂ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದ ನೆರವು ನೀಡಿದ್ದಕ್ಕೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಸಮಧಾನ ವ್ಯಕ್ತಪಡಿಸಿತ್ತು.
ಭದ್ರಾ ಮೇಲ್ದಂಡೆ ಯೋಜನೆಯಡಿ ಬಯಲುಸೀಮೆ ಪ್ರದೇಶಕ್ಕೆ ಹಂಚಿಕೆಯಾದ 29.9 ಟಿ.ಎಂ.ಸಿ. ನೀರನ್ನು ಬಳಕೆ ಮಾಡಿಕೊಳ್ಳಲು ಇದುವರೆವಿಗೂ ಸಾಧ್ಯವಾಗಿಲ್ಲ. ಪ್ರತಿ ವರ್ಷ 2 ರಿಂದ ೩ ಟಿ.ಎಂ.ಸಿ. ನೀರನ್ನು ಲಿಫ್ಟ್ ಮೂಲಕ ವಿ.ವಿ. ಸಾಗರ ಜಲಾಶಯಕ್ಕೆ ಹರಿಸಲಾಗಿದೆ.
ಇನ್ನು 23 ಟಿ.ಎಂ.ಸಿ. ನೀರನ್ನು ಬಳಕೆ ಮಾಡಿಕೊಳ್ಳಲಾಗಿಲ್ಲ. ನೀರು ಆಂಧ್ರ ಪ್ರದೇಶಕ್ಕೆ ಹರಿದು ಹೋಗಿದೆ, ವಾಸ್ತವಾಂಶ ಹೀಗಿರುವಾಗ ಆಂಧ್ರ ಪ್ರದೇಶ ಕ್ಯಾತೆ ತೆಗೆದಿರುವುದಕ್ಕೆ ಯಾವುದೇ ಸತ್ಯಾಂಶಗಳಿಲ್ಲ. ಚುನಾವಣೆ ರಾಜಕೀಯ ಕಾರಣಕ್ಕೆ ಇಂತಹದೊಂದು ಕ್ಯಾತೆ ತೆಗೆಯಲಾಗಿದೆ.
ಗೋದಾವರಿಯಲ್ಲಿ ಲಭ್ಯವಾದ ರಾಜ್ಯದ ಪಾಲಿನಲ್ಲಿ ಜಗಳೂರಿಗೆ 2.4 ಟಿ.ಎಂ.ಸಿ. ನೀರು ಹಂಚಿಕೆಯಾಗಿದೆ. ಆಂಧ್ರದ ಯಾವುದೇ ನೀರನ್ನು ನಾವು ಆಕ್ರಮವಾಗಿ ಬಳಕೆ ಮಾಡಿಕೊಂಡಿಲ್ಲ.
ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಂಡು ಇನ್ನು ಮುಂದಾದರು ಶೀಘ್ರ ಪೂರ್ಣಗೊಳಿಸಲು ಮುಂದಾಗಬೇಕು. ೧೨ ಸಾವಿರ ಕೋಟಿಯಷ್ಟಿದ್ದ ಯೋಜನೆ ಈಗ ೨೨ ಸಾವಿರ ಕೋಟಿ ತಲುಪಿದ. ವಿಳಂಬವಾದಷ್ಟು ಯೋಜನಾ ವೆಚ್ಚ ಜಾಸ್ತಿಯಾಗಲಿದೆ.
ಹಾಗಾಗಿ ರಾಜ್ಯ ಸರ್ಕಾರ ಭದ್ರ ಮೇಲ್ದಂಡೆಗೆ ಕರ್ನಾಟಕದಲ್ಲಿ ಎದುರಾಗಿರುವ ಎಡರು-ತೊಡರುಗಳ ನಿವಾರಿಸಿ ಪೂರ್ಣ ಪ್ರಮಾಣದ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳ ಮುಂದುವರೆಸಬೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.
ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ, ಅಂಪಯ್ಯನ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜೆ.ಯಾದವ ರೆಡ್ಡಿ, ಡಿ.ಮಲ್ಲಿಕಾರ್ಜುನ್, ರೇವಣಸಿದ್ದಪ್ಪ, ಕೆ.ಎಂ.ಮೋಹನ್ ಕುಮಾರ್, ನವೀನ್, ಅಣ್ಣಪ್ಪ, ಜಿ.ಬಿ.ಶೇಖರ್, ಡಿ.ಸಿ.ಲಕ್ಷ್ಮಣ ರೆಡ್ಡಿ, ಕೆ.ಎಂ.ಕಾಂತರಾಜ್, ಬಾಲರಾಜ್ ಇದ್ದರು.