ಸುದ್ದಿಒನ್, ಚಿತ್ರದುರ್ಗ .25 : ಪದೇ ಪದೇ ಕಚೇರಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗುವುದು ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಜಿಲ್ಲಾ ಪಂಚಾಯತ್ ಕಚೇರಿ ಅಭಿವೃದ್ಧಿ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಸಿ.ಎನ್. ನವನೀತ್ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿ ಅಭಿವೃದ್ಧಿ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಸಿ.ಎನ್. ನವನೀತ್ ಅವರು ಮೇಲಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಹಾಗೂ ರಜೆ ಮಂಜೂರಾತಿ ಇಲ್ಲದೆ ಕಳೆದ ಮೇ. 24 ರಿಂದಲೂ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿದರೂ ಸಮಜಾಯಿಷಿ ನೀಡದೆ ನಿರ್ಲಕ್ಷ್ಯ ಮನೋಭಾವ ತೋರಿರುತ್ತಾರೆ.
ಗೈರು ಹಾಜರಿ ಬಗ್ಗೆ ದೂರವಾಣಿ ಮೂಲಕ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದರೂ, ಅವರು ಕರೆ ಸ್ವೀಕರಿಸಿಲ್ಲ. ಇದೇ ರೀತಿ ಪದೇ ಪದೇ ಅನಧಿಕೃತವಾಗಿ ಕಚೇರಿಗೆ ಗೈರು ಹಾಜರಾಗುವ ಮೂಲಕ ಕಚೇರಿ ಕೆಲಸ ಕುಂಠಿತವಾಗಲು ಇವರು ಕಾರಣರಾಗಿರುತ್ತಾರೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿ.ಪಂ. ಯೋಜನಾ ನಿರ್ದೇಶಕರು ವರದಿ ಸಲ್ಲಿಸಿರುತ್ತಾರೆ. ಇದರನ್ವಯ ದ್ವಿದಸ ಸಿ.ಎನ್. ನವನೀತ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿದ್ದು, ಅಮಾನತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.