ಉತ್ತರ ಕನ್ನಡ: ಗುಜರಾತ್ ನಲ್ಲಿ ತೂಗು ಸೇತುವೆ ದುರಂತದಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಆ ಘಟನೆಗೂ ಮುನ್ನ ಒಂದಷ್ಟು ಹುಡುಗರು ಕುಣಿದು, ಹಗ್ಗವನ್ನೆಲ್ಲಾ ಜಗ್ಗಾಡಿದ್ದು ಒಂದು ಕಾರಣ ಎನ್ನಲಾಗುತ್ತಿದೆ. ಆ ದುರಂತ ಇನ್ನು ಮರೆಯಾಗಿಲ್ಲ, ಅದಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿ ಇರುವ ತೂಗು ಸೇತುವೆ ಮೇಲೆ ಕೆಲ ಪ್ರವಾಸಿಗರು ಕಾರನ್ನು ಚಲಾಯಿಸಿದ್ದಾರೆ.
ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಪ್ರವಾಸಕ್ಕೆಂದು ಬರುವವರು ಈ ಸೇತುವೆಯ ಮೇಲೆ ಹೋಗಿ, ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡು ಬರುತ್ತಾರೆ. ಆದರೆ ಹೀಗೆ ಕಾರನ್ನು ತೆಗೆದುಕೊಂಡು ಹೋಗಿ, ಏನಾದರು ಅನಾಹುತವಾದರೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಜನರು ಓಡಾಡುವುದಕ್ಕೆ ಮಾತ್ರ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ. ಕಾರು ಚಲಿಸಿದರೆ ಜನ ಓಡಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಜೊತೆಗೆ ವಾಹನಗಳನ್ನು ಚಲಾಯಿಸುವಷ್ಟು ತೂಗು ಸೇತುವೆ ಗಟ್ಟಿಯಾಗಿದೆಯಾ ಎಂಬುದನ್ನು ಪ್ರವಾಸಿಗರು ಹರಿತುಕೊಳ್ಳಬೇಕಾಗುತ್ತದೆ. ಸದ್ಯ ಪ್ರವಾಸಿಗರು ಕಾರನ್ನು ಕಾಳಿ ನದಿ ಸೇತುವೆ ಮೇಲೆ ಚಲಾಯಿಸಿದ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಮತ್ತು ಅಲ್ಲಿಯೇ ಇದ್ದ ಪ್ರವಾಸಿಗರು ಬುದ್ಧಿ ಹೇಳುವುದಕ್ಕೆ ಯತ್ನಿಸಿದರು, ಕೇಳಿಲ್ಲವಂತೆ. ಅವರ ಮುಂದೆಯೇ ದುರ್ನಡತೆ ತೋರಿಸಿ ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ.