ಚಿಕ್ಕಬಳ್ಳಾಪುರ: ಮೋಸ ಮಾಡೋದಕ್ಕೆ ಯಾವ ದಾರಿಯಾದ್ರೂ ಏನು. ಮನುಷ್ಯ ಆದ್ರೂ ಓಕೆ ದೇವರಾದ್ರೂ ಓಕೆ. ವಂಚನೆ ಮಾಡಬೇಕೆಂದುಕೊಂಡವನ ಮನದಲ್ಲಿ ಯಾವ ಭಯವೂ ಇರೋದಿಲ್ಲ. ಅಲ್ಲೊಬ್ಬ ಮಹಾನುಭಾವ ಮಾಡಿದ್ದು ಅದೇ. ಹಣ ಮಾಡೋಕೆ ದೇವರನ್ನೇ ಬಂಡವಾಳವಾಗಿಸಿಕೊಂಡಿದ್ದ. ಅದು ತಿರುಪತಿ ತಿಮ್ಮಪ್ಪನನ್ನ.
ಒಂದಷ್ಟು ಮಾಹಿತಿ ಗೊತ್ತೆ ಇರುತ್ತೆ ಆದ್ರೂ ಮೋಸ ಹೋದ್ರೆ ಹೇಗೆ. ಅದ್ರಲ್ಲೂ ಎಲ್ಲವೂ ಗೊತ್ತಿದೆ ಅಂದುಕೊಂಡವರೇ ಈ ರೀತಿ ತಿರುಪತಿ ತಿಮ್ಮಪ್ಪನ ಹೆಸರೇಳಿಕೊಂಡು ವಂಚನೆ ಮಾಡುವವನ ವಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದು ಚಿಕ್ಕಬಳ್ಳಾಪುರದಲ್ಲಿರುವ ಅಮೇಜಿಂಗ್ ಡ್ರೀಮ್ ಹೆಸರಿನ ಏಜೆನ್ಸಿಯ ಮಾಲಕಿ ಪ್ರಿಯದರ್ಶಿನಿ ಎಂಬುವವರು.
ಆಂಧ್ರಪ್ರದೇಶ ವೆಸ್ಟ್ ಗೋದಾವರಿ ಜಿಲ್ಲೆಯ ಪಂಜಾ ವೇಮವರಂನ ಪಂಜಾ ರಮಣ ಪ್ರಸಾದ್ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಡುವುದಾಗಿ ಹೇಳಿ ನಂಬಿಸಿ ನೂರಾರು ಟಿಕೆಟ್‍ಗಳನ್ನು ಕೊಟ್ಟಿದ್ದಾನೆ. ಆದರೆ ಕೊಟ್ಟ ಟಿಕೆಟ್‍ಗಳನ್ನು ಪಡೆದು ತಿಮ್ಮಪ್ಪನ ದರ್ಶನಕ್ಕೆ ತೆರಳಿದಾಗ ಆತ ನೀಡಿದ್ದ ಟಿಕೆಟ್‍ಗಳು ನಕಲಿ ಎಂಬುದು ತಿಳಿದು ಬಂದಿದೆ.
ಅಷ್ಟರಲ್ಲಾಗಲೇ ಪ್ರಿಯದರ್ಶಿನಿ ಪಂಜಾ ರಮಣ ಪ್ರಸಾದ್ ಖಾತೆಗೆ 1,28,700 ರೂಪಾಯಿಯನ್ನ ಜಮಾ ಮಾಡಿದ್ರು. ಅದು ನಕಲಿ ಎಂದು ಗೊತ್ತಾದಾಗ ಕರೆ ಮಾಡಿದ್ರೆ ರಮಣ ಪ್ರಸಾದ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದೋಗ ಪ್ರಿಯದರ್ಶಿನಿ ನ್ಯಾಯಕ್ಕಾಗಿ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.