ವರದಿ : ಕೆ.ಎಂ. ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.10) : ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ ಎಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಅತೀವ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ಹಜರತ್ ಟಿಪ್ಪುಸುಲ್ತಾನ್‍ರವರ 271 ನೇ ಜಯಂತಿ ಹಾಗೂ 66 ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಿಟ್ಟಿರುವ ಟಿಪ್ಪುಸುಲ್ತಾನ್‍ನನ್ನು ಕೆಲವರು ದೇಶದ್ರೋಹಿ ಎಂದು ಬಿಂಬಿಸುತ್ತಿರುವುದು ಅತ್ಯಂತ ಖಂಡನೀಯ. ಟಿಪ್ಪುವನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಮೀಸಲಿರಿಸುವುದು ಬೇಡ. ಪ್ರತಿ ವರ್ಷವೂ ಟಿಪ್ಪುಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದೇನೆ. ಅನೇಕ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಇಲ್ಲಿಯವರೆಗೂ ನಡೆದ ಟಿಪ್ಪುಜಯಂತಿಗೆ ಅನೇಕ ಹಿಂದುಗಳು ಬೆಂಬಲಿಸಿದ್ದಾರೆ. ಮುಸ್ಲಿಂ ಯುವಕರು ಈಗಲಾದರೂ ಎಚ್ಚೆತ್ತುಕೊಂಡು ಸಂಘಟನೆಯಾಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಟಿಪ್ಪು ಜಯಂತಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಟಿಪ್ಪು ಬಗ್ಗೆ ಅಭಿಮಾನವುಳ್ಳವರು ಎಲ್ಲರೂ ಆಚರಿಸಬಹುದು.
ದೇಶಕ್ಕಾಗಿ ತ್ಯಾಗ ಮಾಡಿದ ಟಿಪ್ಪುಸುಲ್ತಾನ್‍ರವರ ಇತಿಹಾಸ ಹಾಗೂ ಸತ್ಯವನ್ನು ಮುಚ್ಚಿಡುವ ಷಡ್ಯಂತ್ರ ಒಂದು ವರ್ಗದಿಂದ ನಡೆಯುತ್ತಿದೆ. ಮೈಸೂರು ರಾಜ್ಯ ವಿಸ್ತಾರಗೊಂಡಿದ್ದು, ಟಿಪ್ಪು ಕಾಲದಲ್ಲಿ ಎನ್ನುವುದನ್ನು ಟಿಪ್ಪು ವಿರೋಧಿಗಳು ಮರೆಯಬಾರದು. ಟಿಪ್ಪು ಮೊದಲನೇ ಸ್ವಾತಂತ್ರ್ಯ ಹೋರಾಟಗಾರ. ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ವೇದಿಕೆಗೆ ಹೆಚ್ಚು ಸದಸ್ಯರುಗಳನ್ನು ನೇಮಕ ಮಾಡಿಕೊಂಡು ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮಗಳನ್ನು ಮಾಡುವ ಮೂಲಕ ವೇದಿಕೆಯನ್ನು ಬಲಪಡಿಸಬೇಕಿದೆ ಎಂದು ಸಲಹೆ ನೀಡಿದರು.
ದಲಿತ ಮುಖಂಡ ದುರುಗೇಶಪ್ಪ ಮಾತನಾಡುತ್ತ ಟಿಪ್ಪುಸುಲ್ತಾನ್‍ರವರ ವಿಚಾರ, ಸಾಧನೆ, ಹೋರಾಟ, ಸ್ವಾಭಿಮಾನದ ಕಿಚ್ಚನ್ನು ರಾಜ್ಯದೆಲ್ಲೆಡೆ ಪಸರಿಸಬೇಕು. ಟಿಪ್ಪು ಸಾಮಾನ್ಯನಲ್ಲ ಅಪಾರ ದೇಶಾಭಿಮಾನವಿಟ್ಟುಕೊಂಡು ಬ್ರಿಟೀಷರ ವಿರುದ್ದ ಹೋರಾಡಿದ ಮಹಾ ಶೂರ. ಸ್ವಾತಂತ್ರ್ಯಕ್ಕಾಗಿ ಎಲ್ಲಾ ಜಾತಿಯವರ ಹೋರಾಟವಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ಜನ ತುಂಬಾ ಹಿಂಸೆ ಪಟ್ಟಿದ್ದಾರೆ.
ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಇವರುಗಳು ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಹೋರಾಟ ಚಳುವಳಿಗಳನ್ನು ನಡೆಸಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿಪ್ಪು ದೇಶದ್ರೋಹಿ ಎಂದು ಹೇಳಿಕೊಂಡು ಕೆಲವರು ದ್ವೇಷ, ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಟಿಪ್ಪು ತ್ಯಾಗವನ್ನು ಯಾರಿಂದಲೂ ಮರೆಯಲು ಆಗುವುದಿಲ್ಲ. ದಲಿತರು, ಮುಸ್ಲಿಂರನ್ನು ಬೇರ್ಪಡಿಸುವ ಕೆಲಸ ಮಾಡುತ್ತಿರುವ ಕೋಮುವಾದಿಗಳ ವಿರುದ್ದ ಈಗಲಾದರೂ ದಲಿತರು ಮುಸಲ್ಮಾನರು ಜಾಗೃತರಾಗಿ ಸಂಘಟನೆಯಾಗಬೇಕಿದೆ ಎಂದು ತಾಕೀತು ಮಾಡಿದರು.
ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ ದೇಶದ ಇತಿಹಾಸದ ಪುಟಗಳನ್ನು ನೋಡಿದಾಗ ದೇಶಕ್ಕಾಗಿ ಹೋರಾಡಿ ಯುದ್ದದಲ್ಲಿ ಮಡಿದ ಏಕೈಕ ರಾಜ ಎಂದರೆ ಟಿಪ್ಪುಸುಲ್ತಾನ್. ಅವರಲ್ಲಿದ್ದ ದೇಶಾಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿಯನ್ನು ಘೋಷಿಸಿತು. ಆದರೆ ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಟಿಪ್ಪುಜಯಂತಿಯನ್ನು ಕಸಿದುಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯ ಉಪಾಧ್ಯಕ್ಷ ಹಾಜಿ ಅನ್ವರ್‍ಸಾಬ್, ರಾಜ್ಯ ಕಾರ್ಯದರ್ಶಿ ಹೆಚ್.ಶಬ್ಬೀರ್‍ಭಾಷ, ನಗರಸಭೆ ಮಾಜಿ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ಲಾ, ನಗರಸಭೆ ಸದಸ್ಯ ಸೈಯದ್ ನಸ್ರುಲ್ಲಾ, ಎ.ಜಾಕೀರ್‍ಹುಸೇನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿಗೌಡ, ನಜ್ಮತಾಜ್, ಮುನಿರಾ ಎ.ಮಕಾಂದಾರ್, ಕರ್ನಾಟಕ ರಾಜ್ಯ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಹನೀಫ್, ಪ್ರಸನ್ನ, ಗರೀಬ್‍ಷಾ ಕಮಿಟಿ ಆಡಳಿತಾಧಿಕಾರಿ ಸಿ.ಜೆ.ನಾಸೀರುದ್ದೀನ್, ಸೈಯದ್ ಸೈಫುಲ್ಲಾ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್ ರೆಹಮಾನ್, ಎ.ಸಾಧಿಕ್‍ವುಲ್ಲಾ, ಮುದಸಿರ್ ನವಾಜ್, ಹಸನ್‍ತಾಹೀರ್ ಸೇರಿದಂತೆ ಅನೇಕ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಹೋರಾಟಗಾರರಾದ ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಹಾಗೂ ಪವರ್ ಸ್ಟಾರ್ ಪುನಿತ್‍ರಾಜ್‍ಕುಮಾರ್‍ರವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಿಸಲಾಯಿತು.