ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಡಿ. 06) : ಮೊಳಕಾಲ್ಮೂರು ತಾಲ್ಲೂಕು ಬಿ.ಜಿ. ಕೆರೆಯ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‍ಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು, ಹಾಸ್ಟೆಲ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು, ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜಿ. ಕೆರೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಹಾಸ್ಟೆಲ್‍ನಲ್ಲಿ ಯಾವುದೇ ಸ್ಟಾಕ್ ರಜಿಸ್ಟರ್ ನಿರ್ವಹಣೆ ಮಾಡಿರುವುದು ಕಂಡುಬಂದಿಲ್ಲ. ಭೇಟಿ ಸಂದರ್ಭದಲ್ಲಿ ಹಾಸೆಲ್‍ನಲ್ಲಿ ವಾರ್ಡನ್ ಯಾರೂ ಇರಲಿಲ್ಲ. ಸಂಬಂಧಪಟ್ಟ ಇನ್‍ಚಾರ್ಜ್ ವಾರ್ಡನ್ ಹಾಸ್ಟೆಲ್‍ನಲ್ಲಿ ಸಮರ್ಪಕವಾಗಿ ಯಾವುದೇ ದಾಖಲೆಗಳನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿದೆ.
ತಾಲ್ಲೂಕು ಬಿಸಿಎಂ ಹಾಗೂ ಜಿಲ್ಲಾ ಬಿಸಿಎಂ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ, ಹಾಸ್ಟೆಲ್‍ಗಳ ನಿರ್ವಹಣೆ ಹಾಗೂ ದಾಖಲೆಗಳ ನಿರ್ವಹಣೆ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಹಾಸ್ಟೆಲ್‍ನಲ್ಲಿ ಸಮಸ್ಯೆ ಕಂಡುಬಂದಿದೆ. ಹಾಸ್ಟೆಲ್‍ನಲ್ಲಿ ನಿಗದಿತ ಮೆನು ಪ್ರಕಾರ ಮಕ್ಕಳಿಗೆ ಊಟೋಪಹಾರ ನೀಡದೇ ಇರುವ ಬಗ್ಗೆ ಗಮನಿಸಲಾಗಿದ್ದು, ಹಾಸ್ಟೆಲ್‍ಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಮೆನು ಪ್ರಕಾರ ಮಕ್ಕಳಿಗೆ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸಬೇಕು. ಸರ್ಕಾರ ಇದಕ್ಕಾಗಿ ಅಗತ್ಯವಿರುವ ಹಣ ಖರ್ಚು ಮಾಡುತ್ತದೆ.
ಆದರೆ ಪೂರೈಕೆಯ ಹೊಣೆ ಹೊತ್ತಿರುವ ಏಜೆನ್ಸಿಯವರು ಬಿ.ಜಿ. ಕೆರೆ ಹಾಸ್ಟಲ್‍ಗೆ ಆಹಾರ ಸಾಮಗ್ರಿ ಪೂರೈಕೆ ಮಾಡಿಲ್ಲ. ನಿಯಮಾನುಸಾರ ಏಜೆನ್ಸಿಯವರು ಒಂದು ತಿಂಗಳಿಗೆ ಅಗತ್ಯವಿರುವಷ್ಟು ಆಹಾರ ಸಾಮಗ್ರಿಗಳನ್ನು ಮುಂಗಡವಾಗಿಯೇ ಪೂರೈಕೆ ಮಾಡಬೇಕು. ಏಜೆನ್ಸಿಯವರು ಮಾಡುವ ಸರಬರಾಜಿನ ಬಗ್ಗೆ ಹಾಸ್ಟೆಲ್ ನಿರ್ವಹಣೆ ಮಾಡುವ ವಾರ್ಡನ್‍ಗಳು, ಅಧಿಕಾರಿಗಳು ನಿಗಾ ವಹಿಸಬೇಕು. ಒಂದು ವೇಳೆ ಏಜೆನ್ಸಿಯವರು ಕಾಲಕಾಲಕ್ಕೆ ಸಮರ್ಪಕವಾಗಿ ಆಹಾರಧಾನ್ಯ ಸರಬರಾಜು ಮಾಡುತ್ತಿಲ್ಲ ಅಂದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು, ಸರಿಪಡಿಸಲು ಮುಂದಾಗಬೇಕು, ಇಲ್ಲದಿದ್ದಲ್ಲಿ ಅಂತಹಾ ಏಜೆನ್ಸಿಯನ್ನು ಬದಲಾಯಿಸಲು ಕ್ರಮ ಜರುಗಿಸಬೇಕು.
ಜಿಲ್ಲೆಯಲ್ಲಿ ಇದುವರೆಗೂ ಅಂತಹ ಯಾವುದೇ ದೂರು ಬಂದಿಲ್ಲ. ಹಾಸ್ಟೆಲ್ ವಾರ್ಡನ್, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲುಸ್ತುವಾರಿ ಕೈಗೊಳ್ಳುವಲ್ಲಿ ವಿಫಲರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ವಿವರಣೆ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.
ಬರುವ ದಿನಗಳಲ್ಲಿ ಯಾವುದೇ ಗ್ರಾಮಗಳಿಗೆ ತೆರಳುವ ಸಂದರ್ಭದಲ್ಲಿ ಮಾರ್ಗದಲ್ಲಿನ ಹಾಸ್ಟೆಲ್‍ಗಳಿಗೆ ಆಕಸ್ಮಿಕ ಭೇಟಿ ನೀಡಲಾಗುವುದು. ಒಂದು ವೇಳೆ ಹಾಸ್ಟೆಲ್ ಗಳಲ್ಲಿ ಸ್ಟಾಕ್ ರಜಿಸ್ಟರ್ ನಿರ್ವಹಣೆ ಮಾಡದಿರುವುದು, ನಿಗದಿತ ಮೆನು ಪ್ರಕಾರ ಮಕ್ಕಳಿಗೆ ಆಹಾರ ಮತ್ತು ಸಾಮಗ್ರಿ ವಿತರಣೆ ಮಾಡದೇ ಇರುವುದು ಸೇರಿದಂತೆ ಇತರೆ ಸೌಲಭ್ಯಗಳ ಕೊರತೆ ಉಂಟಾಗಿರುವುದು ಕಂಡುಬಂದಲ್ಲಿ, ಅಂತಹ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಎಚ್ಚರಿಕೆ ನೀಡಿದರು.
ಬಳಿಕ, ಇಲ್ಲಿನ 10 ನೇ ತರಗತಿ ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಈಗಾಗಲೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮಕ್ಕಳು ಈಗಿನಿಂದಲೇ ಪರೀಕ್ಷೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕು. ವ್ಯಾಸಂಗದಲ್ಲಿ ಏಕಾಗ್ರತೆ ಕಾಪಾಡಿಕೊಂಡು, ಉತ್ತಮವಾಗಿ ಪರೀಕ್ಷೆ ಬರೆದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮೊಳಕಾಲ್ಮೂರು ತಹಸಿಲ್ದಾರರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಇಲ್ಲಿನ ಕಚೇರಿ ಸಿಬ್ಬಂದಿಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿದರು, ಅಲ್ಲದೆ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕರಿಸಿದರು. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಡಿ. 02 ರಂದು ಅರ್ಜಿ ಸಲ್ಲಿಸಿದ್ದು, ಹಾಸ್ಟೆಲ್‍ಗೆ ಅರ್ಜಿ ಸಲ್ಲಿಸಲು ಅತ್ಯಂತ ತುರ್ತಾಗಿ ಪ್ರಮಾಣಪತ್ರದ ಅಗತ್ಯವಿದೆ ಎಂಬುದಾಗಿ ವಿದ್ಯಾರ್ಥಿಯೋರ್ವ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ, ತಹಸಿಲ್ದಾರರಿಗೆ ಸೂಚನೆ ನೀಡಿ, ಪರಿಶೀಲನೆಗೊಂಡು, ವಿತರಣೆಗೆ ಸಿದ್ಧವಿದ್ದ, ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸ್ಥಳದಲ್ಲಿಯೇ ಸಿದ್ಧಪಡಿಸಿ ಇದೇ ಸಂದರ್ಭದಲ್ಲಿ ವಿತರಿಸಿದರು.
ಮೊಳಕಾಲ್ಮೂರು ಪ್ರಭಾರ ತಹಸಿಲ್ದಾರ್ ರಘುಮೂರ್ತಿ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.