ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.11) : ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿದರೆ ಲಂಬಾಣಿ, ಭೋವಿ ಜನಾಂಗದವರು ವಿರೋಧಿಸುತ್ತಾರೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವುದನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯಲ್ಲಿ ನಡೆದ ಮಾದಿಗ ಸಮುದಾಯದ ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದು ನನ್ನ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎನ್ನುವ ವೀರಾವೇಶದ ಮಾತುಗಳನ್ನಾಡಿದ್ದರು. ಬೆಳಗಾವಿ ಅಧಿವೇಶನದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದಾಗ ಸದನದಲ್ಲಿ ಸದಾಶಿವ ಆಯೋಗವನ್ನು ಸಮರ್ಥಿಸಿಕೊಂಡು ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ವರದಿ ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಎಲ್ಲವನ್ನು ಮರೆತು ಸದಾಶಿವ ಆಯೋಗದ ವರದಿ ಜಾರಿಗೆ ತರುವುದು ಕಷ್ಟ ಎಂದು ತಮ್ಮ ಮಾತಿನ ವರಸೆಯನ್ನು ಬದಲಿಸುತ್ತಿದ್ದಾರೆ.
ಸಂವಿಧಾನ ವಿರೋಧಿ ಹಾಗೂ ಸಾಮಾಜಿಕ ನ್ಯಾಯದ ವಿರುದ್ದ ಸಿದ್ದರಾಮಯ್ಯನವರು ಸ್ಪಷ್ಠವಾಗಿ ಮಾದಿಗ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಮಾದಿಗ ಸಮುದಾಯದ ಕಾಂಗ್ರೆಸ್ ಮುಖಂಡರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಆಂಜನೇಯ, ಎಲ್.ಹನುಮಂತಯ್ಯ, ಧರ್ಮಸೇನ, ಆರ್.ಬಿ.ತಿಮ್ಮಾಪುರ ಇವರುಗಳ ಅಭಿಪ್ರಾಯ ಮಾದಿಗ ಸಮಾಜಕ್ಕೆ ಬೇಕಾಗಿದೆ. ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ ನಡೆಸುತ್ತಿರುವ ರಾಹುಲ್‍ಗಾಂಧಿ ಕೂಡ ಸದಾಶಿವ ಆಯೋಗದ ವರದಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯದ ಎಲ್ಲಾ ಮುಖಂಡರುಗಳು ಸೇರಿ ಸಿದ್ದರಾಮಯ್ಯನವರ ಹೇಳಿಕೆ ವಿರುದ್ದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ರವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ, ತಿಪ್ಪೇಸ್ವಾಮಿ, ಮೈಲಾರಪ್ಪ, ರವಿಕುಮಾರ್ ಇವರುಗಳು ಎಚ್ಚರಿಸಿದ್ದಾರೆ.