ಬೆಂಗಳೂರು: 2023-24ನೇ ಸಾಲಿನ ಬಜೆಟ್ ಮಂಡನೆಗೆ ಸಮಯ ಹತ್ತಿರವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಅನ್ನು ನಾಳೆ ಸಿಎಂ ಬಸವರಾಜ್ ಮಂಡಿಸಲಿದ್ದಾರೆ. ಸದ್ಯ ಚುನಾವಣೆ ಕೂಡ ಹತ್ತಿರವಿರುವ ಕಾರಣ ಸಿಎಂ ಬೊಮ್ಮಾಯಿ ಅವರು ಮಂಡಿಸುವ ಬಜೆಟ್, ಚುನಾವಣೆಗೂ ಅನುಕೂಲವಾಗಬೇಕು, ಪಕ್ಷಕ್ಕೂ ಪ್ಲಸ್ ಪಾಯಿಂಟ್ ಆಗಬೇಕು. ಜೊತೆಗೆ ಕಾಂಗ್ರೆಸ್ ಪ್ರಣಾಳಿಕೆಗೆ ಸೆಡ್ಡು ಹೊಡೆಯುವಂತ ಬಜೆಟ್ ಮಂಡನೆ ಮಾಡುವುದಕ್ಕೆ ಬಿಜೆಪಿ ಪಕ್ಷ ಸಿದ್ಧತೆ ನಡೆಸಿದೆ. ಪಕ್ಕಾ ಚುನಾವಣಾ ಲೆಕ್ಕಚಾರದಲ್ಲಿಯೇ ನಾಳಿನ ಬಜೆಟ್ ಇರಲಿದೆ ಎನ್ನಲಾಗಿದೆ.
ನಾಳೆ ಬೆಳಗ್ಗೆ 10.30ಕ್ಕೆ ಸರಿಯಾಗಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಎರಡನೇ ಬಜೆಟ್ ಆಗಿರಲಿದೆ. ಈ ಬಾರಿಯ ಬಜೆಟ್ ಗಾತ್ರ ಸುಮಾರು 3 ಲಕ್ಷ ಕೋಟಿ ರೂ ದಾಟುವ ಸಾಧ್ಯತೆ ಇದೆ. ಚುನಾವಣೆ ಬೇರೆ ಹತ್ತಿರವಿರುವ ಕಾರಣ ಸಹಜವಾಗಿಯೇ ಸಾಮಾನ್ಯ ಜನರಿಗೂ ನಿರೀಕ್ಷೆ ಇದೆ.
ಈ ಬಾರಿ ಹೆಚ್ಚಿನ ತೆರಿಗೆ ಹಣ ಸಂಗ್ರಹವಾಗಿದ್ದು ತೆರಿಯಲ್ಲಿ ವಿನಾಯ್ತಿ ಘೋಷಣೆ ಮಾಡುವ ನಿರೀಕ್ಷೆ ಇದೆ. ತೆರಿಗೆ ಹೊರೆಯಿಂದ ಜನರನ್ನು ಮುಕ್ತ ಮಾಡುವಂತ ಬಜೆಟ್ ಇದಾಗಲಿದೆ ಎನ್ನಲಾಗುತ್ತಿದೆ. ಇನ್ನು ರೈತರು, ಮಹಿಳೆಯರು, ಎಸ್ಸಿ/ಎಸ್ಟಿ ಸಮುದಾಯದವರಿಗಾಗಿ, ಹಿಂದುಳಿದ ವರ್ಗಗಳಿಗಾಗಿ ಒತ್ತು ನೀಡುವಂತ ಬಜೆಟ್ ಇದಾಗಿರಲಿದೆ ಎನ್ನಲಾಗುತ್ತಿದೆ.