Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನುಮೋದಿತ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ :  ಡಾ. ರಾಮ್‍ಪ್ರಸಾತ್ ಮನೋಹರ್

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ ಜ. 13 :  ಜಿಲ್ಲಾ ಪಂಚಾಯತ್‍ನಲ್ಲಿ ಈಗಾಗಲೆ ಕ್ರಿಯಾಯೋಜನೆಗೆ ಅನುಮೋದನೆ ಪಡೆದು, ಪ್ರಾರಂಭಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ಇದುವರೆಗೂ ಪ್ರಾರಂಭವಾಗದ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು, ಗುಣಮಟ್ಟದ ಕಾಮಗಾರಿ ಕೈಗೊಂಡು, ಅನುದಾನ ಸೋರಿಕೆಯನ್ನು ತಡೆಗಟ್ಟಬೇಕು.  ಲೋಪವೆಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಡಿಸೆಂಬರ್-2022ರ ಮಾಹೆಯ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು, ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಲ್ಲದೆ ಅನುದಾನದ ಸೋರಿಕೆಯನ್ನು ತಡೆಗಟ್ಟಬೇಕು.  ಸರ್ಕಾರಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು. ಫಲಾನುಭವಿಗಳ ಆಯ್ಕೆ ಮಾಡಿ, ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಂದು, ಸರ್ಕಾರದ ಸೌಲಭ್ಯಗಳನ್ನು ವಿಳಂಬ ಮಾಡದೆ ಸಮರ್ಪಕವಾಗಿ ತಲುಪಿಸಬೇಕು. ವಸತಿ ನಿಲಯ, ಆಸ್ಪತ್ರೆ, ರೈತ ಸಂಪರ್ಕ ಕೇಂದ್ರಗಳಲ್ಲಿ ಉತ್ತಮ ಸೇವೆ ನೀಡಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಸಾಮಗ್ರಿಗಳು ವಿತರಣೆಯಾಗಬೇಕು, ಕ್ರಿಯಾ ಯೋಜನೆಯಂತೆ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು.  ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ದೂರು ಬಂದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತನಿಖೆಗೆ ಸೂಚನೆ :  ಜಿಲ್ಲಾ ಪಂಚಾಯತ್‍ನಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಕಾಮಗಾರಿ ಅನುಷ್ಠಾನದ ಹೊಣೆ ನೀಡುವ ಬದಲು, ನಿಯಮ ಬಾಹಿರವಾಗಿ ನಿರ್ಮಿತಿ ಕೇಂದ್ರದವರಿಗೆ ವಹಿಸಿ, ಅನುದಾನ ನೀಡಲಾಗಿದೆ.  ಈ ಕುರಿತು ಕೈಗೊಂಡಿರುವ ಕಾಮಗಾರಿಗಳ ವಿವರಗಳು, ಕಾಮಗಾರಿಗಳ ಸ್ಥಿತಿ-ಗತಿ ಹಾಗೂ ಬಿಡುಗಡೆ ಮಾಡಲಾಗಿರುವ ಅನುದಾನದ ವಿವರ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಲೆಕ್ಕಪರಿಶೋಧನಾ ಅಧಿಕಾರಿ, ಪಿಆರ್‍ಇಡಿ ಇಇ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ತನಿಖೆ ನಡೆಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು.  ಇದುವರೆಗೂ ಪ್ರಾರಂಭವಾಗಿಲ್ಲದ ಕಾಮಗಾರಿಗಳನ್ನು ಹಿಂಪಡೆದು, ಪಿಆರ್‍ಇಡಿ ಅವರಿಗೆ ಅನುಷ್ಠಾನದ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದರು.

ನರೇಗಾದಡಿ ರಸ್ತೆ ಕಾಮಗಾರಿ ಕೈಗೊಳ್ಳಿ :
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕನ್ವರ್ಜೆನ್ಸ್‍ನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕಿ.ಮೀ. ರಸ್ತೆ ಕಾಮಗಾರಿ ಕೈಗೊಳ್ಳಲು ತಲಾ 03 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈಗಾಗಲೆ ಆರ್ಥಿಕ ವರ್ಷ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ, ಪಿಆರ್‍ಇಡಿ ವಿಭಾಗದವರು ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭಿಸಿಲ್ಲ, ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಕೆಲವೆಡೆ ಗುಂಡಿ ಬಿದ್ದಿವೆ, ಇದನ್ನು ಕರ್ತವ್ಯಲೋಪವೆಂದು ಗಂಭೀರವಾಗಿ ಪರಿಗಣಿಸಲಾಗುವುದು, ಬರುವ ತಿಂಗಳು ಮತ್ತೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು, ಅಷ್ಟರೊಳಗೆ ಎಲ್ಲ ಕಾಮಗಾರಿಗಳು ಪ್ರಾರಂಭಗೊಂಡಿರಬೇಕು ಎಂದು ಪಿಆರ್‍ಇಡಿ ಕಾರ್ಯಪಾಲಕ ಅಭಿಯಂತರರಿಗೆ ತಾಕೀತು ಮಾಡಿದರು.

ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾಗಿದ್ದಕ್ಕೆ ಕಾರಣಕರ್ತರಾದ ಎಲ್ಲ ಅಧಿಕಾರಿಗಳಿಗೂ ನೋಟಿಸ್ ನೀಡುವಂತೆ ಡಾ. ರಾಮ್‍ಪ್ರಸಾತ್ ಮನೋಹರ್ ಅವರು ಸೂಚನೆ ನೀಡಿದರು.

ಗಂಗಾಕಲ್ಯಾಣ ಯೋಜನೆ ಪರಿಶೀಲಿಸಿ : ಜಿಲ್ಲೆಯಲ್ಲಿ ವಿವಿಧ ನಿಗಮಗಳಡಿ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆಗಳಡಿ ಬೋರ್‍ವೆಲ್ ಕೊರೆಯಿಸಿ, ಮೋಟಾರ್ ಅಳವಡಿಕೆ ಮಾಡಲಾಗಿದೆ.  ನಿಗಮದ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯಲ್ಲಿನ ಕನಿಷ್ಟ 10 ರಿಂದ 15 ಫಲಾನುಭವಿಗಳ ಹೊಲಕ್ಕೆ ಭೇಟಿ ನೀಡಿ, ಬೋರ್‍ವೆಲ್‍ಗೆ ಮೋಟಾರು ಅಳವಡಿಕೆ, ವಿದ್ಯುದೀಕರಣ ಆಗಿದಿಯೇ ಎಂಬುದನ್ನು ಹಾಗೂ ಈ ಯೋಜನೆಯಡಿ ಹೊಲಕ್ಕೆ ನೀರು ಹರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು.  ಬಳಿಕ ಸೂಕ್ತ ಫೋಟೋಗಳೊಂದಿಗೆ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಹಾಸ್ಟೆಲ್ ಗುಣಮಟ್ಟದಲ್ಲಿ ರಾಜಿ ಇಲ್ಲ :
ಜಿಲ್ಲೆಯ ಹಾಸ್ಟೆಲ್‍ಗಳಲ್ಲಿನ ಅವ್ಯವಸ್ಥೆ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹಾಸ್ಟೆಲ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಿಂದಲೇ ದೂರುಗಳು ಕೇಳಿಬಂದಿವೆ.  ಹೀಗಾಗಿ ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯ, ಗುಣಮಟ್ಟದ ಆಹಾರ ಪೂರೈಕೆ, ಗುಣಮಟ್ಟದ ಶಿಕ್ಷಣ ಹಾಗೂ ಸ್ವಚ್ಛತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯೇ ಇಲ್ಲ,  ಹಾಸ್ಟೆಲ್ ವ್ಯವಸ್ಥೆ ಸರಿಯಿಲ್ಲದಿದ್ದರೆ ಅದು ಮಕ್ಕಳ ಬೆಳವಣಿಗೆ ಹಾಗೂ ಶಿಕ್ಷಣದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.  ಹೀಗಾಗಿ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿ ವಾರ ಕನಿಷ್ಟ 2 ಹಾಸ್ಟೆಲ್‍ಗೆ ಭೇಟಿ ನೀಡಬೇಕು, ಬರುವ ದಿನಗಳಲ್ಲಿ ಜಿಲ್ಲೆಯ ಹಾಸ್ಟೆಲ್‍ಗಳಲ್ಲಿನ ವ್ಯವಸ್ಥೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಆರ್‍ಬಿಎಸ್‍ಕೆ ಯೋಜನೆ-ಸರಿಯಾಗಿ ಗಮನಹರಿಸಲು ಸೂಚನೆ: ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ (ಆರ್‍ಬಿಎಸ್‍ಕೆ)ದ ಅಡಿಯಲ್ಲಿ ರೋಗ ಪತ್ತೆಯಾದ ಮಕ್ಕಳಿಗೆ ಈ ಯೋಜನೆಯಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿ ಆರೋಗ್ಯ ಕುರಿತಂತೆ ತಿಳಿ ಹೇಳುವ ನಿಟ್ಟಿನಲ್ಲಿ ಸರಿಯಾಗಿ ಗಮನಹರಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 12 ತಂಡ ಪ್ರತಿ ದಿನ ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ರೋಗ ಪತ್ತೆಯಾದ ಮಕ್ಕಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ರೇಣುಪ್ರಸಾಸ್ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಕ್ಕೆ ಸೂಚನೆ:
ಜಿಲ್ಲೆಯಲ್ಲಿ ಖಾಲಿ ಇರುವ 129 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಹೊಸ ಮಾರ್ಗಸೂಚಿಯನ್ವಯ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಚುನಾವಣೆ ಬರುವುದರೊಳಗೆ ಮುಕ್ತಾಯಗೊಳಿಸಬೇಕು. ನಿವೃತ್ತಿಯಾದ ನಂತರವೇ ಹುದ್ದೆಗಲ ಭರ್ತಿಗೆ ಕ್ರಮವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹುದ್ದೆಗಳಿಗೆ ಪಿಯುಸಿ, ಎಸ್‍ಎಸ್‍ಎಲ್‍ಸಿ ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿ ಬಂದಿದ್ದು, ಮಾರ್ಗಸೂಚಿಯನ್ವಯ ನೇಮಕ ಮಾಡಿಕೊಳ್ಳಲಾಗುವುದು ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತೀರ್ಣವಾಗದಂತೆ ನೋಡಿಕೊಳ್ಳಿ:
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿಸಲು ಮಕ್ಕಳಿಗೆ ಸೂಕ್ತ ತರಬೇತಿ ನೀಡಿ ಯಾವುದೇ ಮಕ್ಕಳು ಪರೀಕ್ಷೆಯಲ್ಲಿ ಅನುತೀರ್ಣವಾಗದಂತೆ ನೋಡಿಕೊಳ್ಳಬೇಕು, ಆದರೆ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳಿಗೆ ಹಾಗೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ತಿಳಿಸಿದರು.   ಫಲಿತಾಂಶ ಹೆಚ್ಚಳಕ್ಕೆ ಜುಲೈ ತಿಂಗಳಿಂದಲೇ ಕ್ರಮವಹಿಸಲಾಗಿದ್ದು, ವಿವಿಧ ವಿಷಯಗಳ ಕಾರ್ಯಾಗಾರ ಮಾಡಲಾಗಿದೆ.  ಜಿಲ್ಲೆಯ ಎಲ್ಲ ಮುಖ್ಯ ಶಿಕ್ಷಕರ ಸಭೆ ನಡೆಸಿ  ಜಿಲ್ಲಾ ಹಂತದಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇ.94.31 ಫಲಿತಾಂಶ ಪಡೆದು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ ಉತ್ತಮ ಪಡಿಸಲು ಪಾಸಿಂಗ್ ಪ್ಯಾಕೇಜ್ ತರಬೇತಿ: ಜಿಲ್ಲೆಯು ಕಳೆದ ಮೂರು ವರ್ಷಗಳಿಂದ ಪಿಯುನಲ್ಲಿ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ಪಿಯು ಫಲಿತಾಂಶ ಉತ್ತಮ ಪಡಿಸಲು ಪಾಸಿಂಗ್ ಪ್ಯಾಕೇಜ್ ತರಬೇತಿ ನೀಡಲಾಗಿದೆ ಎಂದು ಪಿಯುಡಿಡಿ ರಾಜು ತಿಳಿಸಿದರು.

ಫಲಿತಾಂಶ ಉತ್ತಮ ಪಡಿಸಲು ಜೂನ್ ಮಾಹೆಯಿಂದಲೇ ಉಪನ್ಯಾಸಕರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆಯಾಗಿದ್ದು, ಈ ಬಾರಿ ಪಿಯು ಫಲಿತಾಂಶದಲ್ಲಿ ಜಿಲ್ಲೆಯು ಟಾಪ್ 10ರೊಳಗೆ ಬರಲು ಶ್ರಮವಹಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿದೇವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!