ಈ ಎರಡು ಕ್ಷೇತ್ರಗಳು ಜೆಡಿಎಸ್ ಪಾಲಿಗೆ ಗೆಲ್ಲಲೇಬೇಕಾದ ಪ್ರತಿಷ್ಠೆಯ ಕಣವಾಗಿದೆ. ಯಾಕಂದ್ರೆ ಮಂಡ್ಯ ಯಾವತ್ತಿದ್ರೂ ಜೆಡಿಎಸ್ ಭದ್ರಕೋಟೆ ಎನ್ನಲಾಗುತ್ತಿತ್ತು. ಹಾಗೇ ತುಮಕೂರಿನಲ್ಲಿ ದೊಡ್ಡ ಗೌಡರಿಗೆ ಇದ್ದಷ್ಟು ಗತ್ತು, ಗೌರವ ಬೇರೆ ಯಾರಿಗೂ ಬಂದಿರಲಿಲ್ಲ. ಆದ್ರೆ ಯಾರದ್ದೋ ಕಿತಾಪತಿ, ಪಿತೂರಿಯಿಂದ ಈ ಎರಡು ಕ್ಷೇತ್ರದಲ್ಲೂ ಜೆಡಿಎಸ್ ಮಕಾಡೆ ಮಲಗಿತ್ತು.
ಮಂಡ್ಯದಲ್ಲಿ ನಿಕಿಲ್ ವಿರುದ್ಧವಾಗಿ ನಿಂತಿದ್ದ ಸುಮಲತಾ ಗೆದ್ದು ಬೀಗಿದ್ದರು. ತುಮಕೂರಿನಲ್ಲಿ ಗೆಲುವಿನ ಅನಿವಾರ್ಯತೆ, ನಿರೀಕ್ಷೆಯಿಂದಲೇ ದೊಡ್ಡಗೌಡ್ರನ್ನ ಸ್ಪರ್ಧೆಗೆ ನಿಲ್ಲಿಸಿದ್ದಾದರೂ ಕಾಂಗ್ರೆಸ್ ತಂತ್ರಗಳಿಂದ ದೊಡ್ಡಗೌಡರೇ ಸೋಲನ್ನ ಅನುಭವಿಸಿದ್ರು. ಅದು ಸ್ವತಃ ಜಿಲ್ಲೆಯಲ್ಲೇ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. ದೇವೇಗೌಡರನ್ನ ಸೋಲಿಸಿದ್ದು ಆಶ್ಚರ್ಯವಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಇದೀಗ ಪರಿಷತ್ ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನ ಆಯ್ಕೆ ಮಾಡಿಯಾಗಿದೆ. ಈಗ ಪ್ರಚಾರ ಕಾರ್ಯ ಶುರುವಾಗಿದೆ. ಈ ಬಾರಿ ಈ ಎರಡು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನೆ ಗೆಲ್ಲಿಸಿಕೊಳ್ಳೋದು ತುಂಬಾ ಅನಿವಾರ್ಯತೆ. ಹೀಗಾಗಿ ತಂದೆ ಮಗ ಇಬ್ಬರು ಪ್ರಚಾರದಲ್ಲಿ ಮುಂದಾಳತ್ವ ವಹಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ನಿಖಿಲ್ ಕುನಾರಸ್ವಾಮಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಸಾಕಷ್ಟು ದಿನಗಳಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಇನ್ನು ತುಮಕೂರಿನಲ್ಲಿ ಕುಮಾರಸ್ವಾಮಿಯೇ ಸ್ವತಃ ಉಸ್ತುವಾರಿ ವಹಿಸಿಕೊಂಡಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಪ್ರಯತ್ನ ಪಡುತ್ತಿದ್ದಾರೆ. ಒಟ್ಟಾರೆ ಸೋತಲ್ಲೇ ಗೆಲ್ಲಬೇಕು ಎಂಬ ಛಲದೊಂದಿಗೆ ಈಗ ಜೆಡಿಎಸ್ ಮುನ್ನುಗ್ಗುತ್ತಿದೆ.