ಸುದ್ದಿಒನ್, ಚಿತ್ರದುರ್ಗ, ಜುಲೈ.13 : ಬ್ರಿಟೀಷರಿಂದ ಸ್ವಾತಂತ್ರ ಪಡೆದ ನಂತರ ದೇಶದಲ್ಲಿ ಸಾಮಾಜಿಕ ನ್ಯಾಯ ಹಾಗೂ ಬದಲಾವಣೆ ತರುವ ನಿಟ್ಟಿನಲ್ಲಿ ಸಂವಿಧಾನ ರಚನೆ ಮಾಡಲಾಯಿತು. ಆ ನಂತರದಲ್ಲಿ ದೇಶ ಆಳಿದ ಎಲ್ಲಾ ಸರ್ಕಾರಗಳು ಜನರಿಗೆ ಸಾಮಾಜಿಕ ನ್ಯಾಯ ಒದಗಿಸಿ ಹಾಗೂ ಬದಲಾವಣೆ ತರುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ ಎಂದು ಕವಿ ಹಾಗೂ ಜನಪರ ಹೋರಾಟಗಾರ ಬಂಜೆಗೆರೆ ಜಯಪ್ರಕಾಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ “ಪತ್ರಿಕಾ ದಿನಾಚರಣೆ”ಯಲ್ಲಿ ಭಾಗವಹಿಸಿ ಪತ್ರಕರ್ತರು, ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ಮಾತನಾಡಿದರು.
ಖಾತ್ಯ ಲೇಖಕ ಡಾ.ಬಾಲಗೋಪಾಲರಾವ್ ಅವರು ದೇಶದಲ್ಲಿ ಸಾಮಾಜಿಕ ತತ್ವಗಳನ್ನು ಬಿತ್ತುವಲ್ಲಿ, ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಮಾಧ್ಯಮಗಳು ವಹಿಸಿದ ಪಾತ್ರದ ಕುರಿತು ಕೃತಿ ರಚಿಸಿದ್ದಾರೆ. ಇದರ ಕನ್ನಡ ಅನುವಾದವನ್ನು ಸ್ವತಃ ನಾನೇ ಮಾಡಿದ್ದು, ಸದ್ಯದಲ್ಲಿಯೇ ಕೃತಿ ಬಿಡುಗಡೆಯಾಗಲಿದೆ ಎಂದರು.
ನಾಡಿನಲ್ಲಿ ಜನಪರ, ರೈತ ಹಾಗೂ ಪರಿಸರ ರಕ್ಷಣೆ ಹೋರಾಟಗಳಲ್ಲಿ ಪತ್ರಿಕೆಗಳು ಹಾಗೂ ಪತ್ರಕರ್ತರ ಪಾತ್ರ ದೊಡ್ಡದಿದೆ. ಸಾಮಾಜಿಕ ಹೋರಾಟಗಾರಿಗೆ ಬೆನ್ನೆಲುಬಾಗಿ ನಿಂತು ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಬಹಳಷ್ಟು ವಿಷಯಗಳು ಪತ್ರಕರ್ತರ ಮೂಲಕವೇ ಸಾಮಾಜಿಕ ಹೋರಾಟಗಾರರಿಗೆ ತಲುಪುತ್ತವೆ. ಸರ್ಕಾರದ ನೀತಿ ನಿರೂಪಣೆಗಳ ಬಗ್ಗೆ ಜನರಿಗೆ ಮುಂಚಿತವಾಗಿ ಜಾಗೃತಗೊಳಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಾ ಬಂದಿವೆ ಎಂದು ಬಂಜೆಗೆರೆ ಜಯಪ್ರಕಾಶ್ ಹೇಳಿದರು.