ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.19) : ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ಹೆಚ್.ಆಂಜನೇಯರವರನ್ನು ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಎಲ್.ಸಿ.ಯನ್ನಾಗಿ ನೇಮಕ ಮಾಡಿಕೊಂಡು ಸಚಿವ ಸ್ಥಾನ ನೀಡುವಂತೆ ಸಾಮಾಜಿಕ ಸಂಘರ್ಷ ಸಮಿತಿ ಹಾಗೂ ವಿವಿಧ ಸಮುದಾಯಗಳ ಮುಖಂಡರುಗಳು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಮಾತನಾಡಿ ಐದು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ ಕೋಮುವಾದಿ ಬಿಜೆಪಿ ಯಿಂದ ಬೇಸತ್ತು ರಾಜ್ಯದ ಜನ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ನೀಡಿದ್ದಾರೆ. ಆದರೆ ಹೊಳಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಚ್.ಆಂಜನೇಯ ಗೆಲ್ಲಬೇಕಿತ್ತು. ಪಕ್ಷದಲ್ಲಿನ ಕೆಲವು ಕುತಂತ್ರಿಗಳಿಂದ ಸೋತರು. ಹಾಗಾಗಿ ದಲಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕಾಗಿರುವುದರಿಂದ ಹೆಚ್.ಆಂಜನೇಯರವರನ್ನು ಎಂ.ಎಲ್.ಸಿ.ಯನ್ನಾಗಿ ನೇಮಿಸಿಕೊಂಡು ನಂತರ ಮಂತ್ರಿಯನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ವರಿಷ್ಠರುಗಳಲ್ಲಿ ಆಗ್ರಹಿಸಿದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡುತ್ತ ಹೆಚ್.ಆಂಜನೇಯ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೂ ದೊಡ್ಡ ಸಮುದಾಯ ದಲಿತರಿಗೆ ಫಲ ಸಿಗಬೇಕಾದರೆ ಅವರನ್ನು ಎಂ.ಎಲ್.ಸಿ.ಯನ್ನಾಗಿ ಮಾಡಿ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವಿನಂತಿಸಿದರು.
ಬೈಲಮ್ಮ ಮಾತನಾಡಿ ಸಣ್ಣ ಸಣ್ಣ ಸಮುದಾಯಗಳಿಗೆ ಸ್ಪೂರ್ತಿಧಾಯಕರಾಗಿದ್ದ ಹೆಚ್.ಆಂಜನೇಯರವರ ಸೋಲು ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಯಾರೂ ನಿರೀಕ್ಷಿಸಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಹಾಗಾಗಿ ಹೆಚ್.ಆಂಜನೇಯರವರಿಗೆ ಸಿದ್ದರಾಮಯ್ಯನವರ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ನಾಯಕರುಗಳನ್ನು ಕೋರಿದರು.
ಕೆ.ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.