ಹಾಸನ: ರಾಜ್ಯದಲ್ಲಿ ಮಳೆರಾಯನ ಆರ್ಭಟದಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು, ಶಿರೂರು ಈಗ ಶಿರಾಡಿ ಘಾಟ್ ಕೂಡ ಗುಡ್ಡ ಕುಸಿತದಿಂದ ಹೊರತಾಗಿಲ್ಲ. ಇಂದು ಸಿಎಂ ಸಿದ್ದರಾಮಯ್ಯ ಅವರು ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ತಂಡದೊಂದಿಗೆ ಗುಡ್ಡ ಕುಸಿತದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಡ್ಡ ಕುಸಿತದ ಭೀಕರತೆಯನ್ನು ಕಂಡು ಶಾಕ್ ಆದ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದನ್ನು ಪ್ರಶ್ನಿಸಿದ್ದಾರೆ. ಗುಡ್ಡ ಕುಸಿತಕ್ಕೆ ಇದು ಕೂಡ ಒಂದು ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂ ಸ್ವಾಧೀನಗೊಳಿಸಿಕೊಳ್ಳುವುದು. ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ..? ಗುಡ್ಡಗಳನ್ನು 30-45 ಅಡಿ ಕತ್ತರಿಸಿ ತಡೆಗೋಡೆಗಳನ್ನು ನಿರ್ಮಿಸಿದ್ದರೆ ಗುಡ್ಡ ಕುಸಿತ ತಡೆಯಬಹುದಿತ್ತಲ್ಲವೇ ಎಂದಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿವರಣೆ ನೀಡಿದ್ದು, ಒಟ್ಟು 45 ಕಿಲೋ ಮೀಟರ್ ನಲ್ಲಿ 35 ಕಿಲೋ ಮೀಟರ್ ಹೈವೇ ಕಾಮಗಾರಿ ಮುಗಿದಿದೆ. ಇನ್ನು 10 ಕಿಲೋ ಮೀಟರ್ ಮಾತ್ರ ಬಾಕಿ ಇದೆ. ಆದರೆ ಎಲ್ಲಿಯೂ ತಡೆಗೋಡೆ ನಿರ್ಮಿಸಿಲ್ಲ. ಮಣ್ಣಿನ ಗುಣಮಟ್ಟ ಪರೀಕ್ಷಿಸಿ, ಅದರ ಆಧಾರದ ಮೇಲೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಂತೆ ಕಾಣಿಸುತ್ತಿಲ್ಲ ಎಂದು ವರದಿ ಒಪ್ಪಿಸಿದ್ದಾರೆ.