ಚಿತ್ರದುರ್ಗ. ಫೆ.16: ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ, ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಸವಿತಾ ಸಮಾಜ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಎನ್.ಡಿ. ಕುಮಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಆಚರಣೆ ಸಮಾರಂಭದಲ್ಲಿ ಸವಿತಾ ಮಹರ್ಷಿ ಅವರ ಕುರಿತು ಉಪನ್ಯಾಸ ನೀಡಿದರು.
ಚರ್ತುವೇದಗಳಲ್ಲಿ ಒಂದಾದ ಸಂಗೀತ ವೇದ ಎಂದೇ ಕರೆಯಲ್ಪಡುವ ಸಾಮವೇದವನ್ನು ರಚಿಸಿದ ಮಹಾನ್ ಬ್ರಹ್ಮಜ್ಞಾನಿ ಸವಿತಾ ಮಹರ್ಷಿ ಎಂದು ಹೇಳಲಾಗುತ್ತದೆ. ಸಾಮವೇದವು ಸಂಗೀತದ ಮೂಲಗ್ರಂಥವಾಗಿದ್ದು, ಹಾಗಾಗಿ ನಮ್ಮ ಸವಿತಾ ಸಮಾಜದವರು ಸಂಗೀತ, ವೈದ್ಯ ವೃತ್ತಿ ಹಾಗೂ ಕ್ಷೌರಿಕ ವೃತ್ತಿಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು, ಸರ್ವರಿಗೂ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಮಾತನಾಡಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಮಹಾನ್ ವ್ಯಕ್ತಿಗಳ ತತ್ವ, ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ನಾಗರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಚಂದ್ರಶೇಖರ್, ಮುಖಂಡರಾದ ವಿ.ರಂಜಿತ್, ಶ್ರೀನಿವಾಸ್, ಕೆ.ನಾಗರಾಜ್, ಕುಮಾರ್ ಧರ್ಮಣ್ಣ, ಕೆ.ಶ್ರೀನಿವಾಸ್, ಎಸ್.ಮಾರಣ್ಣ, ರಾಜಣ್ಣ, ಕನ್ನಡ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಹಿರಿಯೂರಿನ ತ್ರಿವೇಣಿ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.