ಗದಗ : ವಿವೇಕ ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಶಾಲೆಗಳನ್ನೆಲ್ಲಾ ಕೇಸರಿಮಯ ಮಾಡಲು ಹೊರಟಿದ್ದಾರೆ ಎಂದೆಲ್ಲಾ ಚರ್ಚೆಗಳು ಶುರುವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಆರ್ಕಿಟೆಕ್ಚರ್ ಯಾವ ಬಣ್ಣ ಹೇಳುತ್ತಾರೋ ಅದನ್ನು ಹಚ್ಚುತ್ತೇವೆ ಎಂದಿದ್ದಾರೆ.
ಕೇಸರಿ ಅನ್ನೋದು ಒಂದು ಬಣ್ಣ ಹೌದೋ ಅಲ್ವೋ..? ಕೇಸರಿ ಬಣ್ಣ ಚೆನ್ನಾಗಿದೆ ಅಂತ ಹೇಳಿದ್ರೆ ಅದನ್ನೇ ಹಚ್ಚುತ್ತೇವೆ. ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ. ಆರ್ಕಿಟೆಕ್ಟ್ ಮೇಲೆ ಬಿಡ್ತೀವಿ. ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೇಸರಿ ಇದೆ. ಅದನ್ನ ಯಾಕೆ ಇಟ್ಕೊಂಡಿದ್ದಾರೆ. ಪೂರ್ತಿ ಹಸಿರು ಬಣ್ಣ ಮಾಡಿಕೊಳ್ಳಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಶಿಕ್ಷಣ ಇಲಾಖೆ ರಾಜ್ಯದಾದ್ಯಂತ 7000 ಕ್ಕೂ ಅಧಿಕ ಶಾಲಾ ಕಾಲೇಜು ಕೊಠಡಿಗಳಿಗೆ ಸ್ವಾಮಿ ವಿವೇಕಾನಂದ (Swami Vivekananda)ರ ನೆನಪಿನಲ್ಲಿ ವಿವೇಕ ಶಾಲೆ ಅಂತಾ ಹೆಸರಿಡಲು ಮುಂದಾಗಿದೆ. ಕೊಠಡಿಗಳಿಗೆ ವಿವೇಕಾನಂದರ ಉಡುಗೆಯ ಬಣ್ಣವನ್ನೇ ಏಕರೂಪವಾಗಿ ಕೇಸರಿ ಬಣ್ಣ ಬಳಿಸಲು ಚಿಂತಿಸಿದೆ.
ಇನ್ನು ಟಿಪ್ಪು ಬಗ್ಗೆಯೂ ಹರಿಹಾಯ್ದಿರುವ ಸಚಿವ ನಾಗೇಶ್, ಕನ್ನಡವನ್ನು ಕೊಂದಿದ್ದು ಟಿಪ್ಪು ಅಂತ ಗೊತ್ತಾಯ್ತು. ಶ್ರೀರಂಗಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಗೊತ್ತಾಯ್ತು. ಪಹಣಿ ಅಂದ್ರೆ ಕನ್ನಡ ಎಂದುಕೊಂಡಿದ್ದೆ. ಶಿರಸ್ತೇದಾರ ಅಂದ್ರೆ ಕನ್ನಡ ಎಂದುಕೊಂಡಿದ್ವಿ. ಈಗ ಎಲ್ಲವೂ ಗೊತ್ತಾಗಿದೆ ಎಂದಿದ್ದಾರೆ.