ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್ ಮೊ : 87220 22817
ಚಿತ್ರದುರ್ಗ(ಡಿ.25) : ಸದಾಶಿವ ಆಯೋಗದ ವರದಿ ನಮ್ಮ ನಾಲ್ಕು ಸಮಾಜಕ್ಕೆ ಮಾರಕವಾಗಿದೆ. ಇದು ಜಾರಿಯಾದರೆ ನಮ್ಮ ಅಸ್ಥಿತ್ವ ಇಲ್ಲದಾಗುತ್ತದೆ. ಇದನ್ನು ನಾವು ವಿರೋಧಿಸುತ್ತೇವೆ. ಇದರ ಅಂಗವಾಗಿ ಜನವರಿ 10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಬೆಂಗಳೂರು, ಇದರ ಆಶ್ರಯದಲ್ಲಿ ಪರಿಶಿಷ್ಟ ಸಮುದಾಯಗಳ ವಿರುದ್ದ ಆವಾಸ್ತವಿಕ ಮತ್ತು ಅವೈಜ್ಞಾನಿಕ ಆಂಶಗಳನ್ನು ಒಳಗೊಂಡಿರುವ ನ್ಯಾ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರಕ್ಕೆ ಏಕಮುಖವಾಗಿ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಚಿತ್ರದುರ್ಗ ಜಿಲ್ಲಾ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸದಾಶಿವ ಆಯೋಗದ ವರದಿ ಬೋವಿ, ಲಂಬಾಣಿ ಕೂರಚ ಮತ್ತು ಕೂರಮ ಸಮುದಾಯಗಳಿಗೆ ಮರಣ ಶಾಸನ ಇದ್ದಂತೆ, ಈ ವರದಿ ಗೊಂದಲದ ಗೂಡಾಗಿದೆ ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಮೇಲೆ ಗೊಂದಲವನ್ನುಂಟು ಮಾಡಿದೆ. ಈ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದರೆ ಮತ್ತೋಂದು ತಂಡ ಇದನ್ನು ಜಾರಿ ಮಾಡಬಾರದೆಂದು ಒತ್ತಡವನ್ನು ಸರ್ಕಾರದ ಮೇಲೆ ಹಾಕುತ್ತಿದೆ.
ಈ ವರದಿಯನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸದೆ ಕೇಂದ್ರಕ್ಕೆ ಶಿಫಾರಸು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಈ ಮುಂಚೆ ವರದಿಯಲ್ಲಿನ ಸಾಧಕ-ಭಾದಕಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಿ ತದ ನಂತರ ತಪ್ಪುಗಳು ಕಂಡು ಬಂದಲ್ಲಿ ಅದನ್ನು ಸರಿಪಡಿಸಿ ಆ ಮೇಲೆ ಕೇಂದ್ರಕ್ಕೆ ಕಳುಹಿಸಬೇಕು ಆದರೆ ಸರ್ಕಾರ ಇದನ್ನು ಮಾಡದೇ ಯಾವುದೋ ಒಂದು ಜನಾಂಗದ ಒತ್ತಡಕ್ಕೆ ಮಣಿದು ಆತುರವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದು ಖಂಡನೀಯ ಎಂದು ಶ್ರೀಗಳು ತಿಳಿಸಿದರು.
ನಮ್ಮ ನಾಲ್ಕು ಸಮುದಾಯದವರು ರೆಟ್ಟೆಯನ್ನು ನಂಬಿದವರು ಅಕ್ಷರದ ಜ್ಞಾನ ಇಲ್ಲದಾಗಿದೆ ಆದರೆ ಅಕ್ಷರದ ಜ್ಞಾನವನ್ನು ಹೊಂದಿದವರು ಇದರ ಬಗ್ಗೆ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಈ ವರದಿಯಲ್ಲಿ ಈ ನಾಲ್ಕು ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಹೂರಗಡೆ ಇಡುವ ಹುನ್ನಾರ ನಡೆಯುತ್ತಿದೆ. ಇದರಿಂದ ಮುಂದಿನ ದಿನಮಾನದಲ್ಲಿ ನಮ್ಮ ಜನಾಂಗ ಮೀಸಲಾತಿ ಇಲ್ಲದಾಗುತ್ತದೆ. ಮುಂದಿನ ದಿನದಲ್ಲಿ ಪಕ್ಷಗಳು ಮತ್ತು ಸರ್ಕಾರ ಈ ಅಜೆಂಡಾವನ್ನು ಹಿಡಿದುಕೊಂಡು ಬಂದರೆ ಅದನ್ನು ನಾವುಗಳು ತಿರಸ್ಕಾರ ಮಾಡುತ್ತೇವೆ. ಪರಿಶಿಷ್ಟ ಜಾತಿಯಲ್ಲಿರುವ ನಾವುಗಳು ಅಣ್ಣ-ತಮ್ಮಂದಿರಂತೆ ಇದ್ದೇವೆ. ಅದರೆ ಈ ವರದಿಯಿಂದ ಒಬ್ಬರಿಗೊಬ್ಬರು ವೈಮನಸ್ಸು ಮೂಡುವಂತೆ ಮಾಡುತ್ತದೆ ನಮಗೆ ನಮ್ಮ ಸಮುದಾಯವನ್ನು ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ಇಮ್ಮಡಿ ಸಿದ್ದರಾಮ ಶ್ರೀಗಳು ತಿಳಿಸಿದರು.
ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಈ ಸಮಯದಲ್ಲಿ ರಾಜ್ಯದ 224 ಶಾಸಕರುಗಳಿಗೆ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಎಂದು ಮನವಿಯನ್ನು ಎಲ್ಲರು ಸಲ್ಲಿಸಬೇಕಿದೆ ಇಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಆಗದಂತೆ ನೋಡಿಕೊಳ್ಳಬೇಕಿದೆ. ಪ್ರಾಣವನ್ನಾದರೂ ಕೊಟ್ಟೇವು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಬೇಕಿದೆ. ಜ.10ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಚಿತ್ರದುರ್ಗದಿಂದ 1 ಲಕ್ಷ ಜನ ಭಾಗವಹಿಸಬೇಕಿದೆ ಇದಕ್ಕೆ ಬೇಕಾದ ಸಿದ್ದತೆಯನ್ನು ನೀವೇ ಮಾಡಿಕೊಳ್ಳಬೇಕಿದೆ ಎಂದು ಶ್ರೀಗಳು ಕರೆ ನೀಡಿದರು.
ಲಂಬಾಣೀ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಶ್ರೀಗಳು ಮಾತನಾಡಿ, ಸರ್ಕಾರಕ್ಕೆ ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ 13 ವರ್ಷಗಳಾಗಿದೆ ಅಲ್ಲಿದ ನಿರಂತರವಾಗಿ ಇದರ ವಿರುದ್ದ ಹೋರಾಟವನ್ನು ಮಾಡಿಕೊಂಡು ಬರಲಾಗಿದೆ. ಈಗ ಬೆಳಗಾವಿ ಅಧಿವೇಶನದ ನಂತರ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಸರ್ಕಾರ ಮುಂದಾಗಿದೆ ಇದನ್ನು ತಡೆಯಬೇಕಿದೆ. ಈ ವರದಿ ಕೇಂದ್ರಕ್ಕೆ ಹೋಗಿ ಅನುಷ್ಠಾನವಾದರೆ ನಮ್ಮ ನಾಲ್ಕು ಸಮುದಾಯಗಳಿಗೆ ಕಂಟಕ ಬರಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ ಶ್ರೀಗಳು, ಎಡಗೈ ಸಮುದಾಯ ರಾಜಕೀಯ ಪ್ರಬಾವನ್ನು ಬೀರುವುದರ ಮೂಲಕ ವರದಿ ಅನುಷ್ಠಾನಕ್ಕೆ ಮುಂದಾಗಿದೆ ಇದನ್ನು ನಾವುಗಳು ವಿರೋಧಿಸುತ್ತೇವೆ. ಇದರ ನಮ್ಮ ಸಮುದಾಯದ ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ಮಾತನಾಡುತ್ತಿಲ್ಲ, ಬಹಿರಂಗವಾಗಿಯೂ ಸಹಾ ಹೋರಾಟವನ್ನು ಮಾಡುತ್ತಿಲ್ಲ ಎಂದು ವಿಷಾಧಿಸಿದರು.
ನಮ್ಮ ಸಮುದಾಯಗಳು ಅಕ್ಷರ ಜ್ಞಾನ ಇಲ್ಲದವರು ಕೂಲಿಯನ್ನು ಮಾಡುತ್ತಾ ಬದುಕನ್ನು ನಡೆಸುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ ಅದನ್ನು ತಿಳಿಸುವ ಕಾರ್ಯವನ್ನು ಮಾಡಬೇಕಿದೆ ಈ ವರದಿ ಅಂಬೇಡ್ಕರ್ ಮಾತಿನಂತೆ ಇಲ್ಲವಾಗಿದೆ. ಈಗ ಮೀಸಲಾತಿಯನ್ನು ಪಡೆದವರು ಇದರ ಬಗ್ಗೆ ಮಾತನಾಡುತಿಲ್ಲ, ಅದರೆ ನಮ್ಮ ಮುಂದಿನ ಪೀಳಿಗೆಗೆ ಈ ಮೀಸಲಾತಿ ಅನಿವಾರ್ಯವಾಗಿದೆ. ಇದನ್ನು ಉಳಿಸಬೇಕಿದೆ. ಇಲ್ಲವಾದರೆ ಕಷ್ಠವಾಗುತ್ತದೆ.
ಜನಾಂಗದವರಿಗೆ ನಮ್ಮ ಮುಂದಿನ ಹೋರಾಟದ ಬಗ್ಗೆ ತಿಳಿಸಿ ಅವರನ್ನು ಜ.10ರಂದು ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ಕರೆತರುವ ಕಾರ್ಯವನ್ನು ಎಲ್ಲರು ಸೇರಿ ಮಾಡಬೇಕಿದೆ ಎಂದು ಸರ್ದಾರ ಸೇವಾಲಾಲ್ ಶ್ರೀಗಳು ಕರೆ ನೀಡಿದರು.
ಸಮಾಜದ ಮುಖಂಡರಾದ ರವಿ ಮಾಕಳಿ ಮಾತನಾಡಿ, ಈ ವರದಿ ಜಾರಿಯಾಗದಂತೆ ತಡೆಯಲು ಶ್ರೀಗಳು ಇದರ ಬಗ್ಗೆ ಹಲವಾರು ಸಭೆಗಳನ್ನು ಮಾಡುವುದರ ಮೂಲಕ ಸಮಾಜದ ಮುಖಂಡರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.
ಜನವರಿ 10ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪರಿಶಿಷ್ಟರ 101 ಜಾತಿಗಳ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ. ಚುನಾಯಿತ ಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಸಹಕಾರವನ್ನು ನೀಡುತ್ತಿಲ್ಲ, ಸಮಾಜದ ಹಲವಾರು ಮುಖಂಡರು ಇದರ ಬಗ್ಗೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಶ್ರೀಗಳು ಸಮುದಾಯಕ್ಕೆ ಬಂದಿರುವ ಕುತ್ತನ್ನು ನಿವಾರಿಸಲು ಶ್ರೀಗಳು ಸಮುದಾಯದ ಚುನಾಯಿತ ಪ್ರತಿನಿಧಿಗಳಿಗೆ ಆದೇಶವನ್ನು ನೀಡಬೇಕೆಂದು ಮನವಿ ಮಾಡಿದರು.
ಲಂಬಾಣಿ ಸಮುದಾಯದ ಮುಖಂಡರಾದ ರಾಘವೇಂದ್ರ ಮಾತನಾಡಿ, ಸದಾಶಿವ ಆಯೋಗದ ವರದಿ ತಯಾರಿಕೆಯಲ್ಲಿ ಹಿಂದಿನ ಸಚಿವರಾದ ನಾರಾಯಣಸ್ವಾಮಿ ಮತ್ತು ಕಾರಜೋಳರವರ ಪಾತ್ರ ಇದೆ. ಆಯೋಗದ ಆಧ್ಯಕ್ಷರಿಂದ ನಮಗೆ ಬೇಕಾದ ರೀತಿಯಲ್ಲಿ ವರದಿಯನ್ನು ತಿರುಚಿ ಬರೆಸಿದ್ದಾರೆ. ಇದರ ಬಗ್ಗೆ ಬಹಿರಂಗವಾಗಿ ಚರ್ಚೆಯಾದರೆ ನಮ್ಮ ಹುಳುಕು ಹೂರಬರುತ್ತದೆ ಎಂದು ಬಹಿರಂಗ ಚರ್ಚೆಗೆ ಬಿಡದೆ ಏಕಾಏಕಿಯಾಗಿ ಕೇಂದ್ರಕ್ಕೆ ಶಿಪಾರಸ್ಸು ಮಾಡಲು ಸರ್ಕಾರ ಮುಂದಾಗಿದೆ. ಸಮುದಾಯದ ಚುನಾಯಿತ ಪ್ರತಿನಿಧಿಗಳು ವರದಿಯ ಬಗ್ಗೆ ಪೃಶ್ನಿಸುವ ಹಕ್ಕನ್ನು ಪ್ರದರ್ಶನ ಮಾಡಬೇಕಿದೆ ಎಂದರು.
ಭೋವಿ ಸಮಾಜದ ಮುಖಂಡರಾದ ಆನಂದಪ್ಪ ಮಾತನಾಡಿ, ನಮ್ಮ ಮುಂದಿನ ಹೋರಾಟ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನವಾಗದಂತೆ ತಡೆಯುವುದಾಗಿದೆ. ಇದರ ಬಗ್ಗೆ ಶ್ರೀಗಳು ನೀಡಿದ ಸೂಚನೆಯಂತೆ ಎಲ್ಲರು ನಡೆಯಬೇಕಿದೆ ಸಮಾಜಕ್ಕೆ ಸ್ಪಂದಿಸದ ರಾಜಕಾರಣಿಗಳನ್ನು ಸಮಾಜದಿಂದ ಬಹಿಷ್ಕಾರ ಹಾಕುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಅದ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಮಂಜುನಾಥ್, ಆನಂತ್ ಕುಮಾರ್, ಲೋಕೇಶ್ ನಾಯ್ಕ್, ಇಂದ್ರಜೀತ್ ನಾಯ್ಕ್, ನಾಗೇಂದ್ರನಾಯ್ಕ್, ಆನಂತನಾಯ್ಕ್, ಪ್ರಕಾಶ್ ರಾಮದಾಸ್ ನಾಯ್ಕ್, ನಾಗರಾಜ್, ಮಾರುತಿ, ಪ್ರಕಾಶ್ ಹನುಮನಾಯ್ಕ್ ಶಿವರುದ್ರಯ್ಯ, ರಾಮಚಂದ್ರಪ್ಪ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.