ಗದಗ: ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟಲು ಮೂವರು ಸಾವಿನ ಬಾಗಿಲು ತಟ್ಟಿದ್ದಾರೆ. ಇದು ಯಶ್ ಗೆ ಹೇಳಲಾರದ ನೋವಾಗಿ ಪರಿಣಮಿಸಿದೆ. ಶೂಟಿಂಗ್ ಬ್ಯುಸಿಯಲ್ಲಿದ್ದ ಯಶ್, ಮೃತರನ್ನು ನೋಡಲು ಮೃತರ ಗ್ರಾಮಕ್ಕೆ ಬಂದಿದ್ದಾರೆ. ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಯಶ್, ನನ್ನ ಬರ್ತ್ ಡೇಯಿಂದ ಯಾರಿಗೂ ನೋವಾಗುವುದು ಬೇಡ. ನನಗೆ ಇವೆಲ್ಲ ಇಷ್ಟ ಆಗಲ್ಲ. ಅಭಿಮಾನ ಇರಲಿ. ಆದರೆ ಆ ಅಭಿಮಾನ ಅತಿಯಾಗುವುದು ಬೇಡ. ಈ ರೀತಿ ಕಟೌಟ್ ಕಟ್ಟುವುದು, ಬೈಕ್ ಚೇಸ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ. ನನಗೆ ನೀವೂ ಅಭಿಮಾನ ತೋರಿಸುವುದು ಎಂದರೆ ಅದುವೆ ಒಳ್ಳೆಯ ಕೆಲಸ ಮಾಡುವುದು. ಇನ್ಯಾವತ್ತು ಈ ರೀತಿ ಮಾಡಬೇಡಿ. ಮೊದಲು ನಿಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದಾರೆ.
ಬ್ಯಾನರ್ ಕಟ್ಟುವ ವೇಳೆ 21 ವರ್ಷ ಹನಮಂತ ಹರಿಜನ, 20 ವರ್ಷದ ಮುರಳಿ ನಡವಿನಮನಿ ಹಾಗೂ 19 ವರ್ಷದ ನವೀನ್ ಗಾಜಿ ಎನ್ನಲಾಗಿದೆ. ಇವರಷ್ಟೇ ಅಲ್ಲ ಇನ್ನೂ ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಭೂಮಿಯಲ್ಲಿ ಏಕಕಾಲಕ್ಕೆ ಮೂವರ ಯುವಕರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ. ಯಶ್ ವಿಚಾರ ತಿಳಿದ ಕೂಡಲೇ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ಮೃತರ ಗ್ರಾಮಕ್ಕೆ ಓಡೋಡಿ ಬಂದಿದ್ದಾರೆ. ಅಭಿಮಾನಿಗಳಿಂದ ಈ ರೀತಿಯ ಅವಘಡವಾಗುತ್ತಿರುವುದು ಇದೇ ಮೊದಲೇನು ಅಲ್ಲ. ಸ್ಟಾರ್ ಗಳು ಕೂಡ ಅಭಿಮಾನಿಗಳ ಜೊತೆಗೆ ಮನವಿ ಮಾಡುತ್ತಲೇ ಇರುತ್ತಾರೆ. ದೂರದಿಂದಾನೇ ಹಾರೈಸಿದರು ಸಾಕು ಎಂದು.