ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.17 : ಐದು ಗ್ಯಾರೆಂಟಿಗಳ ಜೊತೆ ರಾಜ್ಯದ ಮುಖ್ಯಮಂತ್ರಿ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲು ಒಪ್ಪಿದ್ದಾರೆಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಸಚಿವ ಬಿ.ಜಡ್ ಜಮೀರ್ ಅಹಮದ್ ಖಾನ್ ತಿಳಿಸಿದರು.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಕೆ.ಅನ್ವರ್‍ಭಾಷಾರವರಿಗೆ ಜಿಲ್ಲಾ ವಕ್ಫ್ ಮಂಡಳಿಯಿಂದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಕ್ಫ್ ಬೋರ್ಡ್ ನಲ್ಲಿ ಒಳ್ಳೆ ಕೆಲಸ ಮಾಡಲಿ ಎನ್ನುವ ವಿಶ್ವಾಸವಿಟ್ಟು ಕೆ.ಅನ್ವರ್‍ಭಾಷಾರವರನ್ನು ವಕ್ಫ್ ಮಂಡಳಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ. ಜವಾಬ್ದಾರಿ ಜಾಸ್ತಿಯಿದೆ. ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕುವರೆ ತಿಂಗಳುಗಳಾಗಿದೆ. 2013 ರಲ್ಲಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಂಜೂರು ಮಾಡಲಾಗಿದ್ದ ಹಳೆ ಮನೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಈ ಬಾರಿ 2400 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. 2018 ರಿಂದ 23 ರವರೆಗೆ ಅಧಿಕಾರದಲಿದ್ದ ಬಿಜೆಪಿ. ಸರ್ಕಾರ ಒಂದೆ ಒಂದು ಹೊಸ ಮನೆಗಳನ್ನು ಬಡವರಿಗೆ ಮಂಜೂರು ಮಾಡಿಲ್ಲ. ಒಂದು ಮನೆ ಕಟ್ಟಿಕೊಳ್ಳಲು 7.50 ಲಕ್ಷ ರೂ.ಗಳು ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮೂರು ಲಕ್ಷ ರೂ.ಗಳ ಸಬ್ಸಿಡಿ ದೊರಕುತ್ತದೆ. ಉಳಿದ ನಾಲ್ಕುವರೆ ಲಕ್ಷ ರೂ.ಗಳನ್ನು ಬಡ ಫಲಾನುಭವಿಗಳು ಹೊಂದಿಸುವುದು ಕಷ್ಟ ಎಂದು ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡಿದ್ದೇನೆ. ಸ್ಲಂ ಬೋರ್ಡ್‍ನಿಂದ 1.80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ರಾಜೀವ್‍ಗಾಂಧಿ ವಸತಿ ಯೋಜನೆಯಡಿ 53 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಒಂದು ಲಕ್ಷ ಎಂಬತ್ತು ಸಾವಿರದ ಇನ್ನೂರು ಮನೆಗಳನ್ನು ನಿರ್ಮಿಸಲು 5400 ಕೋಟಿ ರೂ.ಗಳು ಬೇಕು. ವಸತಿಯಿಲ್ಲದೆ ಬೀದಿಯಲ್ಲಿರುವ 2 ಲಕ್ಷ 40 ಸಾವಿರ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಬಡವರು, ದಲಿತರು, ಅಲ್ಪಸಂಖ್ಯಾತರ ಪರವಾಗಿರುವ ಸಿದ್ದರಾಮಯ್ಯನವರು 3150 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದರು.
ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1500 ಕೋಟಿ ರೂ.ಗಳನ್ನು ಕಡಿಮೆಗೊಳಿಸಿ ಎರಡು ಸಾವಿರ ಕೋಟಿಗೆ ತಂದು ನಿಲ್ಲಿಸಿದ್ದನ್ನು ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ಎಂಟು ನೂರು ಕೋಟಿಗೆ ತಂದರು. ಅಲ್ಪಸಂಖ್ಯಾತರ ಮಕ್ಕಳಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದುಪಡಿಸಿತು. ಅಲ್ಪಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನದಿಂದಾಗಿ ಐದು ಲಕ್ಷ ಮಕ್ಕಳು ಪ್ರಯೋಜನ ಪಡೆಯುತ್ತಿದ್ದರು ಬಿಜೆಪಿ.ಸರ್ಕಾರ ಅಧಿಕಾರದಲ್ಲಿದ್ದಾಗ ಎಲ್ಲದಕ್ಕೂ ಕತ್ತರಿ ಹಾಕಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ 1300 ಅಲ್ಪಸಂಖ್ಯಾತ ಮಕ್ಕಳಿಗೆ ಸಿದ್ದರಾಮಯ್ಯನವರು 2013 ರಲ್ಲಿ ಮುಖ್ಯಮಂತ್ರಿಯಾದಾಗ ಮೂರು ಲಕ್ಷ ರೂ. ಕೊಡುತ್ತಿದ್ದರು. ಈಗ ಹನ್ನೊಂದುವರೆ ಲಕ್ಷ ಶುಲ್ಕವಾಗಿರುವುದರಿಂದ ಐದುವರೆ ಲಕ್ಷ ರೂ.ಗಳನ್ನು ನೀಡಲು ತೀರ್ಮಾನಿಸಿದ್ದಾರೆ. ರಾಜ್ಯದ ಜನ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾಗಿದ್ದು, ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರೆಂಟಿಗಳನ್ನು ಈಡೇರಿಸಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನೂತನ ಅಧ್ಯಕ್ಷರಾಗಿರುವ ಕೆ.ಅನ್ವರ್‍ಭಾಷಾ ಜಿಲ್ಲೆಯ ಎಲ್ಲಾ ಮಸೀದಿ ಹಾಗೂ ದರ್ಗಾಗಳಿಗೆ ಪ್ರಾಶಸ್ತ್ಯ ನೀಡಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡುತ್ತ ಕೆ.ಅನ್ವರ್‍ಭಾಷಾ ಗ್ರಾಮೀಣ ಭಾಗದಿಂದ ಬಂದವರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಮಗ್ರ ಅಭಿವೃದ್ದಿಗೆ ಶ್ರಮಿಸಲಿ ಎಂದು ಹೇಳಿದರು.
ವಸತಿ ಸಚಿವ ಬಿ.ಜಡ್. ಜಮೀರ್ ಅಹಮದ್‍ಖಾನ್ ಬಡವರು, ದಲಿತರ ಪರವಾಗಿರುವವರು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಿದ್ದಾಂತ ಒಪ್ಪಿರುವ ರಾಜಕಾರಣಿ. ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಸಚಿವ ಜಮೀರ್ ಅಹಮದ್ ಖಾನ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಕೊಟ್ಟಿದ್ದಾರೆ. ಮುಸಲ್ಮಾನರಿಗಿದ್ದ ಶೇ.ನಾಲ್ಕು ಮೀಸಲಾತಿಯನ್ನು ರಾಜ್ಯ ಬಿಜೆಪಿ.ಸರ್ಕಾರ ರದ್ದುಪಡಿಸಿದೆ. ಹಿಂದೂ-ಮುಸ್ಲಿಂರು ಸೇರಿ ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆನ್ನುವುದನ್ನು ಕೋಮುವಾದಿ ಬಿಜೆಪಿ.ಯವರು ಅರ್ಥಮಾಡಿಕೊಳ್ಳಬೇಕು ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಬರಪೀಡಿತ ಚಿತ್ರದುರ್ಗ ಜಿಲ್ಲೆಯಲ್ಲಿ ವಸತಿ ಹೀನರು ಸಾಕಷ್ಟು ಜನರಿದ್ದಾರೆ. ಎಲ್ಲರಿಗೂ ಮನೆಗಳನ್ನು ಕಟ್ಟಿಸಿಕೊಡುವಂತೆ ಸಚಿವ ಜಮೀರ್ ಅಹಮದ್‍ಖಾನ್‍ರವರಲ್ಲಿ ಹೆಚ್.ಆಂಜನೇಯ ಮನವಿ ಮಾಡಿದರು.
ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ ಕೆ.ಅನ್ವರ್‍ಭಾಷ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ದೊಡ್ಡ ಸಾಧನೆ. ಅಲ್ಪಸಂಖ್ಯಾತರು ಶಕ್ತಿ ನೀಡಿದ್ದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಠ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಪಕ್ಷ ತೊರೆದು ಬಿಜೆಪಿ.ಗೆ ಹೋಗಿದ್ದ ನಾನು ಮತ್ತೆ ಕಾಂಗ್ರೆಸ್‍ಗೆ ಬರಲು ಜಮೀರ್ ಅಹಮದ್‍ಖಾನ್ ಹಾಗೂ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇವರುಗಳೆ ಕಾರಣ ಎನ್ನುವುದನ್ನು ಸ್ಮರಿಸಿಕೊಂಡರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡುತ್ತ ಎಲ್ಲಾ ಸಮುದಾಯದವರ ಪ್ರೀತಿ ವಿಶ್ವಾಸ ಗಳಿಸಿರುವ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್‍ಭಾಷಾ ಜಿಲ್ಲೆಯಲ್ಲಿರುವ ಸಾಕಷ್ಟು ಸಮಸ್ಯೆಗಳ ಕಡೆ ಗಮನ ಹರಿಸಿ ಅಲ್ಪಸಂಖ್ಯಾತರಿಗೆ ಹೆಚ್ಚು ಸೌಲಭ್ಯಗಳನ್ನು ಸರ್ಕಾರದಿಂದ ದೊರಕಿಸಬೇಕು ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್‍ಭಾಷಾ ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆ ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಈ ಭಾಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸಗಳಾಗಬೇಕು. ಅನೇಕ ವರ್ಷಗಳಿಂದಲೂ ಬೆಂಗಳೂರಿನವರೆ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷರಾಗುತ್ತಿದ್ದರು. ಬಹಳ ವರ್ಷಗಳ ನಂತರ ಚಿತ್ರದುರ್ಗ ಜಿಲ್ಲೆಯವನಾದ ನನಗೆ ಅಧಿಕಾರ ಸಿಕ್ಕಿರುವುದಕ್ಕೆ ಸಚಿವ ಜಮೀರ್ ಅಹಮದ್‍ಖಾನ್ ಸೇರಿದಂತೆ ಅನೇಕರ ಶ್ರಮವಿದೆ. ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದರಿಂದ ವಕ್ಫ್ ಮಂಡಳಿ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಭರವಸೆ ನೀಡಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಇವರುಗಳು ಮಾತನಾಡಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜೆ.ಜೆ.ಹಟ್ಟಿಯ ಯುವ ಮುಖಂಡ ಡಾ.ಬಿ.ತಿಪ್ಪೇಸ್ವಾಮಿ, ಕೆ.ಪಿ.ಸಿ.ಸಿ. ಸದಸ್ಯ ವಿಜಯಕುಮಾರ್ ವೇದಿಕೆಯಲ್ಲಿದ್ದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್(ಎಂ.ಸಿ.ಓ.ಬಾಬು) ಪ್ರಾಸ್ತಾವಿಕವಾಗಿ ಮಾತನಾಡಿದರು.