ಸುದ್ದಿಒನ್ ಡೆಸ್ಕ್
ಚಿತ್ರದುರ್ಗ, (ಏ.25) : ಕೋಟೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಮಂಗಳವಾರ ಹೊಳಲ್ಕೆರೆ ಹೊರತು ಪಡಿಸಿ ಜಿಲ್ಲೆಯ ಹಲವೆಡೆ ಸ್ವಲ್ಪ ಮಳೆಯಾಗಿದ್ದು, ವರುಣ ತಂಪೆರೆದಿದ್ದಾನೆ.
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಇಂದು ವರುಣಾಗಮನವಾಗಿದೆ.
ಚಿತ್ರದುರ್ಗ ನಗರದಲ್ಲಿ ಮಂಗಳವಾರ ಮಧ್ಯಾನ್ಹ ದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ 4:30 ರ ವೇಳೆಗೆ ಸುಮಾರು ಅರ್ಧ ಗಂಟೆಗಳ ಕಾಲ ಸಾಧಾರಣ ಮಳೆ ಸುರಿಯಿತು.
ಮಳೆಯಲ್ಲಿಯೇ ವಾಹನಗಳು ಸಂಚರಿಸಿದ ದೃಶ್ಯಗಳು ಕಂಡುಬಂದವು. ಎಂಕೆ ಹಟ್ಟಿಯ ಹೈವೇ ಅಂಡರ್ ಪಾಸ್, ನಗರದ ಮೆದೇಹಳ್ಳಿ ರೈಲ್ವೆ ಅಂಡರ್ ಪಾಸ್, ತುರುವನೂರು ಗೇಟ್ ಬಳಿಯಿರುವ ಹೈವೇ ಅಂಡರ್ ಪಾಸ್, ತುರುವನೂರು ರಸ್ತೆಯ ರೈಲ್ವೆ ಅಂಡರ್ ಪಾಸ್, ಕೆಲವೆಡೆಗಳಲ್ಲಿ ಸಣ್ಣ ಮಳೆಗೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಚುನಾವಣಾ ಚೆಕ್ ಪೋಸ್ಟ್ ಗಳಿಗೆ ಹಾನಿ :
ಚುನಾವಣಾ ಅಕ್ರಮ ತಡೆಗಾಗಿ ಜಿಲ್ಲೆಯಲ್ಲಿ 35 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು,
ಅಧಿಕಾರಿಗಳು, ಪೊಲೀಸರು ಹಾಗೂ ರಕ್ಷಣಾ ಪಡೆಯವರು ಕಾರ್ಯನಿರ್ವಹಿಸುತ್ತಿದ್ದು ಕೆಲವೆಡೆ ಮಳೆ ಗಾಳಿಗೆ ಶಾಮಿಯಾನ ಟೆಂಟ್ ಗಳು ಬಿದ್ದಿವೆ, ಬ್ಯಾರಿಕೇಡ್ ಗಳು, ಕುರ್ಚಿಗಳು ಹಾರಿಹೋಗಿವೆ, ಸಿಸಿ ಟಿವಿಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು, ವಿದ್ಯುತ್ ಸ್ಥಗಿತಗೊಂಡಿದ್ದು, ಸಿಬ್ಬಂದಿ ಕೆಲಸಕ್ಕೆ ಮಳೆಯಿಂದ ತೊಂದರೆಯಾಗಿದೆ.