ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಫೆ.04) : ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನದ ಒಳಮಠದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ದೊಡ್ಡ ರಥೋತ್ಸವದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು
ಭಾಗವಹಿಸಿದ್ದರು.
ಮುಕ್ತಿ ಬಾವುಟ ಹರಾಜಿಗೆ ಕಠಿಣ ನಿಯಮ ರೂಪಿಸಿ.ಕಳೆದ ಬಾರಿ ಜಾತ್ರೆ ಸಂದರ್ಭದಲ್ಲಿ ಮುಕ್ತಿಬಾವುಟದ ಯಶಸ್ವಿ ಹರಾಜುದಾರರು ಇದುವರೆಗೂ ಪೂರ್ಣ ಮೊತ್ತ ಪಾವತಿಸಿಲ್ಲ. ಹೀಗಾಗಿ ರಥೋತ್ಸವ ಸಂದರ್ಭದಲ್ಲಿನ ಮುಕ್ತಿ ಬಾವುಟದ ಹರಾಜಿಗೆ ಸಂಬಂಧಪಟ್ಟಂತೆ ಕಠಿಣ ನಿಯಮಾವಳಿ ರೂಪಿಸಬೇಕು.
ಯಶಸ್ವಿ ಹರಾಜು ದಾರರಿಂದ ಮುಂಗಡವಾಗಿ ಚೆಕ್ ತೆಗದುಕೊಳ್ಳಬೇಕು. ಹರಾಜು ಕೂಗಿ ಹಣ ಪಾವತಿಸದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ತಿಪ್ಪೇಶ್ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು ಸಭೆ ನಡೆಸಿ ಅಭಿಪ್ರಾಯ ಪಡೆದು ಸೂಕ್ತ ನಿಯಮ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಈ ಭಾಗದಲ್ಲಿ ಕಳದ 5 ವರ್ಷಗಳ ಪಟ್ಟಣ ಸಂಕರ್ಪ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಪಟ್ಟಣಕ್ಕೆ ಆಗಮಿಸುವವರಿಗೆ ತೊಂದರೆಯಾಗುತ್ತಿದೆ. ಇಲಾಖೆಯವರು ಪ್ರತಿ ವರ್ಷವೂ ಸಬೂಬು ಹೇಳುತ್ತಾರೆ. ನಮಗೆ ಸಾಕಾಗಿದೆ. ಇಲಾಖೆ ವತಿಯಿಂದ ರಸ್ತೆ ಮಾಡದಿದ್ದರೆ, ನಾವೇ ಚಂದಾ ಎತ್ತಿ ರಸ್ತೆ ನಿರ್ಮಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಸಭೆಯಲ್ಲೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು, ರಸ್ತೆಯಲ್ಲಿ ಅಪಘಾತವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
ತಾತ್ಕಾಲಿಕವಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿ ಸರಿಪಡಿಸಿ, ಜಾತ್ರೆ ನಂತರ ಶಾಶ್ವತ ಕಾಮಗಾರಿ ಕೆಲಸ ಶುರು ಮಾಡಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.