ಬೆಂಗಳೂರು: ಕಳೆದ ಬಾರಿ ಪಿಎಸ್ಐ ಪರೀಕ್ಷೆಗಾಗಿ ಸಾಕಷ್ಟು ಕಷ್ಟಪಟ್ಟು ಓದಿದ್ದ ಅದೆಷ್ಟೋ ಅಭ್ಯರ್ಥಿಗಳು ಕಣ್ಣೀರು ಹಾಕಿದ್ದರು. ನಕಲಿ ಮಾಡಿದ್ದರ ಪರಿಣಾಮ ಎಷ್ಟೋ ಅಭ್ಯರ್ಥಿಗಳಿಗೆ ಇದರಿಂದ ಸಮಸ್ಯೆ ಉಂಟಾಗಿತ್ತು. ಅಭ್ಯರ್ಥಿಗಳು ಮನವಿ ಮಾಡಿದರು, ಮರು ಪರೀಕ್ಷೆಗೆ ಆದೇಶ ನೀಡಲಾಗಿತ್ತು. ಇದೀಗ ಮರುಪರೀಕ್ಷೆ ಅಭ್ಯರ್ಥಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆ.
ಆದರೆ ಇದರ ನಡುವೆ ಮತ್ತೆ ಏನಾದರೂ ಯಡವಟ್ಟು ಆದರೆ ಎಂಬ ಆತಂಕ ಸಹಜವಾಗಿಯೇ ಇದೆ. ಹೀಗಾಗಿ ಅಭ್ಯರ್ಥಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಧೈರ್ಯ ನೀಡಿದ್ದಾರೆ. ಗುಪ್ತದಳದ ಪರಿಶೀಲನೆ ವೇಳೆ ಈ ರೀತಿಯ ಮಾಹಿತಿ ಹೊರಬಿದ್ದಿದೆ. ಸಿಸಿಬಿ ಪೊಲೀಸರು ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ಭಯವಿಲ್ಲ. ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬೆಂಗಳೂರಿನಲ್ಲೆ ಪರೀಕ್ಷೆ ನಡೆಸುತ್ತಿದ್ದೇವೆ. ಅಭ್ಯರ್ಥಿಗಳಿಗೆ ಚಿಂತೆ ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ ಎಂದಿದ್ದಾರೆ. ಈ ಮೂಲಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಒಂದಷ್ಟು ಮನಸ್ಥೈರ್ಯ ತುಂಬಿದ್ದಾರೆ. ಆತಂಕವನ್ನು ಕಳೆದು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವುದಕ್ಕೆ ಪ್ರೋತ್ಸಾಹ ನೀಡಿದ್ದಾರೆ.