ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 14 : ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಡದೆ ಕಾಲ ಹರಣ ಮಾಡುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಭೆ ನಡೆಸಲಾಯಿತು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದುರಂಗಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಮೂಡಾ, ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳು ಆರೋಪದಲ್ಲಿ ಮುಳುಗಿವೆಯೇ ವಿನಃ ಅಭಿವೃದ್ದಿ ಕುರಿತು ಚರ್ಚಿಸುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಎರಡರಲ್ಲೂ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರೈತರು ಜಮೀನುಗಳಿಗೆ ಓಡಾಡಲು ರಸ್ತೆ, ಬಂಡಿ ಜಾಡಿಗಾಗಿ ಒತ್ತಾಯಿಸುತ್ತಲೆ ಬರುತ್ತಿದ್ದೇವೆ. ಅಧಿಕಾರಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ. ಬೀಜ, ಗೊಬ್ಬರ, ಕ್ರಿಮಿನಾಶಕಗಳ ಬೆಲೆ ದುಬಾರಿಯಾಗಿದೆ. ಹನಿ ನೀರಾವರಿ ಪೈಪ್‍ಗಳು ಕಳಪೆ ಮಟ್ಟದಿಂದ ಕೂಡಿದೆ. ಹಾಲಿನ ದರ ಕಡಿಮೆಗೊಳಿಸಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತನಿಗೆ ಸರ್ಕಾರ ಬರೆ ಎಳೆಯುತ್ತಿದೆ. ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ನಿಲ್ಲಿಸಬೇಕು. ಜಿಲ್ಲಾಧಿಕಾರಿಗಳು ತಕ್ಷಣವೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಸೋಮಗುದ್ದು ರಂಗಸ್ವಾಮಿ ಸಭೆಯಲ್ಲಿ ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಕುರುಬರಹಳ್ಳಿ ಶಿವಣ್ಣ, ಬಸ್ತಿಹಳ್ಳಿ ನಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ ಹಳಿಯೂರು, ಎಸ್.ಎಂ.ಶಿವಕುಮಾರ್, ಮಹಮದ್ ಸೈಫುಲ್ಲಾ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಪುಟ್ಟಲಿಂಗಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಗಿರೀಶ್‍ರೆಡ್ಡಿ, ಪರಮೇಶ್ವರಪ್ಪ ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು.