ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಹೈಟೆಕ್ ಬಸ್ನಿಲ್ದಾಣ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಸತ್ಯಂ ಸುಂದರ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ.ನೌಕರರ ಬಳಗದಿಂದ ತಮ್ಮ ಕಚೇರಿಯಲ್ಲಿ ಶುಕ್ರವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಂಗಳೂರು, ಮಣಿಪಾಲ್ಗೆ ಚಿಕಿತ್ಸೆಗೆ ಹೋಗುವ ಈ ಭಾಗದ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ರಾಜಹಂಸ ಬಸ್ಗಳ ಸಂಚಾರ ಆರಂಭಿಸಲಾಗಿದೆ. ಬೆಳಿಗ್ಗೆ 5-30 ಕ್ಕೆ ಚಿತ್ರದುರ್ಗದಿಂದ ಮೈಸೂರಿಗೆ ರಾಜಹಂಸ ಬಸ್ ಸೇವೆ ಶುರುವಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಜಿಲ್ಲೆಯ 48 ಹಳ್ಳಿಗಳಿಗೆ ಬಸ್ಗಳಿರಲಿಲ್ಲ. ಅಂತಹ ಕಡೆಗೆಲ್ಲಾ ಸರ್ಕಾರಿ ಬಸ್ಗಳು ಸಂಚರಿಸುತ್ತಿವೆ. ಹಿಂದೆ ದಿನಕ್ಕೆ ಇಪ್ಪತ್ತೊಂದು ಲಕ್ಷ ರೂ.ಗಳ ಆದಾಯವಿತ್ತು. ಈಗ ಒಂದು ದಿನಕ್ಕೆ ಐದು ಲಕ್ಷ ರೂ.ಗಳ ವರಮಾನ ಜಾಸ್ತಿಯಾಗಿದೆ. ಬಸ್ಗಳು ಕೆಟ್ಟರೆ ದಾವಣಗೆರೆಯಲ್ಲಿರುವ ವರ್ಕ್ಶಾಪ್ಗೆ ಹೋಗಬೇಕಿತ್ತು. ಈಗ ಇಲ್ಲಿಯೇ ಕಾರ್ಯಾಗಾರ ಆರಂಭಗೊಂಡಿದೆ. ಕಳೆದ ಏಪ್ರಿಲ್ನಲ್ಲಿ ಹೊಳಲ್ಕೆರೆಯಲ್ಲಿಯೂ ಸರ್ಕಾರಿ ಬಸ್ ನಿಲ್ದಾಣ ಉದ್ಘಾಟಿಸಲಾಗಿದೆ ಎಂದು ಹೇಳಿದರು.
1985 ರಲ್ಲಿ ಚಿತ್ರದುರ್ಗ ಬಸ್ನಿಲ್ದಾಣ ಪ್ರಯಾಣಿಕರಿಗಾಗಿ ತನ್ನ ಸೇವೆಯನ್ನು ಪ್ರಾರಂಭಿಸಿತು. ಈಗ ಸಾಕಷ್ಟು ಸುಧಾರಣೆಯಾಗಿದೆ. ಐದು ಬಸ್ನಿಲ್ದಾಣಗಳಲ್ಲಿ ಅಂಗವಿಕಲರಿಗೆ ಶೌಚಾಲಯ ನಿರ್ಮಿಸಲಾಗುವುದು. 357 ಮಂದಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಆ ಪೈಕಿ 13 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಳಿಸಿದ್ದೇವೆ. ಚಿತ್ರದುರ್ಗ ಡಿಪೋ 2019 ಕ್ಕೆ ಹೋಲಿಸಿದರೆ ಶೇ.20 ರಷ್ಟು ಆದಾಯ ಅಧಿಕವಾಗಿದ್ದು, ರಾಜ್ಯದಲ್ಲಿಯೇ ಐದನೆ ಸ್ಥಾನದಲ್ಲಿದೆ. ಚಳ್ಳಕೆರೆಯಲ್ಲಿ ಎರಡು ಸಿಟಿ ಬಸ್ ಹಾಗೂ ಚಿತ್ರದುರ್ಗದಲ್ಲಿ ಐದು ಸಿಟಿ ಬಸ್ಗಳು ಸಂಚರಿಸುತ್ತಿವೆ. ಒಟ್ಟಾರೆ ಪ್ರಯಾಣಿಕರಿಗೆ ಸೇವೆ ನೀಡುವುದು ನಮ್ಮ ಸಂಸ್ಥೆಯ ಉದ್ದೇಶ ಎಂದರು.
ವಿಭಾಗೀಯ ಸಂಚಲನಾಧಿಕಾರಿ ಸತೀಶ್, ಸಹಾಯಕ ಅಭಿಯಂತರ ನಾಗರಾಜ್, ಕೆ.ಎಸ್.ಆರ್.ಟಿ.ಸಿ.ನೌಕರರಾದ ನಾಗರಾಜ್, ಮೂರ್ತಿನಾಯ್ಕ, ಉಮೇಶ್, ಸಂಜೀವ ಈ ಸಂದರ್ಭದಲ್ಲಿ ಹಾಜರಿದ್ದರು.