ಚಿತ್ರದುರ್ಗ,(ಸೆಪ್ಟೆಂಬರ್. 29) : ರೇಬೀಸ್ ರೋಗ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಗುರುವಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2022-23ನೇ ಸಾಲಿನ ವಿಸ್ತರಣಾ ಘಟಕಗಳ ಬಲಪಡಿಸುವಿಕೆ ಕಾರ್ಯಕ್ರಮದಡಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ರೇಬೀಸ್ ಮತ್ತು ಪ್ರಾಣಿ ಜನ್ಯ ರೋಗಗಳ ನಿಯಂತ್ರಣ ಕುರಿತು ತಾಂತ್ರಿಕ ವಿಚಾರ ಸಂಕಿರಣ ಮತ್ತು ಜಾಗೃತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬೀಸ್ ಸೋಂಕು ಮಾರಣಾಂತಿಕವಾಗಿದೆ. ರೇಬೀಸ್ ರೋಗಕ್ಕೆ ಒಂದು ಬಾರಿ ತುತ್ತಾದರೆ ಇದಕ್ಕೆ ಯಾವುದೇ ಪರಿಹಾರವಿಲ್ಲ. ಹಾಗಾಗಿ ರೇಬೀಸ್ ರೋಗ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.
ರೇಬೀಸ್ ರೋಗ ಹಾಗೂ ಪ್ರಾಣಿ ಜನ್ಯ ರೋಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾಹಿತಿ ಪಡೆದು, ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ರೈತರಿಗೂ ರೇಬೀಸ್ ರೋಗ ನಿಯಂತ್ರಣದ ಕುರಿತು ಮಾಹಿತಿ ತಲುಪಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ಜಿಲ್ಲೆಯಲ್ಲಿ ಯಾರೂ ಕೂಡ ರೇಬೀಸ್ ರೋಗಕ್ಕೆ ತುತ್ತಾಗಬಾರದು. ಭಾರತ ರೇಬೀಸ್ ಮುಕ್ತ ದೇಶವಾಗುವ ಮೊದಲು ತಮ್ಮ ತಮ್ಮ ತಾಲ್ಲೂಕುಗಳು ರೇಬೀಸ್ ಮುಕ್ತವಾಗಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಸಾಕು ಪ್ರಾಣಿಗಳನ್ನು ಹೆಚ್ಚಾಗಿ ಜನರು ಸಾಕುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮವಾಗಿ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಪ್ರಾಣಿಜನ್ಯ ರೋಗಗಳ ಕುರಿತು ಅರಿವು ಮೂಡಿಸಿ, ಪ್ರಾಣಿಗಳಿಗೆ ರೇಬೀಸ್ ವೈರಸ್ ಹರಡದಂತೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ರೇಬೀಸ್ನಿಂದಾಗಿ ದೇಶದಲ್ಲಿ ವಾರ್ಷಿಕವಾಗಿ 50 ಸಾವಿರ ಜನ ಮರಣ ಹೊಂದಿದ್ದಾರೆ. ರೈತರ ಹಸು, ಎತ್ತುಗಳು ರೇಬೀಸ್ ರೋಗಕ್ಕೆ ತುತ್ತಾಗಿ ಮರಣ ಹೊಂದಿದರೆ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ರೇಬೀಸ್ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅವಶ್ಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ರೇಬೀಸ್ ರೋಗವು ಶೇ.100 ರಷ್ಟು ಸಾವು ಸಂಭವಿಸುತ್ತದೆ ಜೊತೆಗೆ ಶೇ.100 ರಷ್ಟು ಸಹ ರೋಗವನ್ನು ತಡೆಯಲು ಸಾಧ್ಯವಿದೆ. ಹಾಗಾಗಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ, ನಮ್ಮ ಪಕ್ಕದ ರಾಜ್ಯ ಗೋವಾ ರೇಬೀಸ್ ಮುಕ್ತ ರಾಜ್ಯವಾಗಿದ್ದು, ಇದರ ಜೊತೆಗೆ ಕೇರಳ ರಾಜ್ಯವೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನಮ್ಮ ರಾಜ್ಯವನ್ನೂ ರೇಬೀಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದ್ದು, ಈ ವರ್ಷ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 28 ಸಾವಿರ ನಾಯಿಗಳಿದ್ದು, ಪ್ರಾಥಮಿಕವಾಗಿ 14 ಸಾವಿರ ನಾಯಿಗಳಿಗೆ ಲಸಿಕೆ ನೀಡಲಾಗಿದೆ. ಇನ್ನೂ 14 ಸಾವಿರ ನಾಯಿಗಳು ಬೀದಿ ನಾಯಿಗಳಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಹೊಣೆಗಾರಿಕೆಯಿಂದ ಈ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಶಿವಮೊಗ್ಗದ ಹೊಸೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಅವರು ರೇಬೀಸ್ ಮತ್ತು ಪ್ರಾಣಿಜನ್ಯ ರೋಗಗಳ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎನ್.ಕಾಶೀ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎನ್.ಬಾಬುರತ್ನ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಿ.ತಿಪ್ಪೇಸ್ವಾಮಿ ಸೇರಿದಂತೆ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.