ಸುದ್ದಿಒನ್ : ಇಂದು ಕೋಟಿ ಕೋಟಿ ಮನಸ್ಸುಗಳು ಬಯಸುತ್ತಿದ್ದ ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಶುಕ್ರವಾರವೇ ರಾಮಲಲ್ಲಾ ಮೂರ್ತಿ ಹೇಗಿದೆ ಎಂಬ ದರ್ಶನವಾಗಿತ್ತು. ಆದರೆ ಇಂದು ದೃಷ್ಟಿ ಇರುವ ರಾಮಲಲ್ಲಾ ವಿಗ್ರಹ, ಅಲಂಕಾರಗೊಂಡ ರಾಮಲಲ್ಲಾನನ್ನು ನೋಡುವುದೇ ಆನಂದ ಪರಮಾನಂದ. ಇಡೀ ಹಿಂದೂಗಳು ಈ ಸಂತಸದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಮಾಡಿದ್ದಾರೆ. ಶಾಸ್ತ್ರ ಸಂಪ್ರದಾಯದ ಮೂಲಕ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಈ ಮೂರ್ತಿಯನ್ನು ಕೆತ್ತಿ, ಇಂದು ದೃಷ್ಟಿ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಅಲಂಕಾರಗೊಂಡ ರಾಮಲಲ್ಲಾನನ್ನು ಕಂಡು ಅರುಣ್ ಯೋಗಿರಾಜ್ ಸಂತಸಗೊಂಡಿದ್ದಾರೆ. ಸಂಭ್ರಮಪಟ್ಟಿದ್ದಾರೆ. ಈ ಗಳಿಗೆಯ ಬಗ್ಗೆ ಹಂಚಿಕೊಂಡಿರುವ ಅರುಣ್ ಯೋಗಿರಾಜ್, ಈ ಭೂಮಿಯಲ್ಲೇ ನನ್ನಷ್ಟು ಅದೃಷ್ಟವಂತ ಬೇರೆ ಯಾರೂ ಇಲ್ಲ. ನನ್ನ ಪೂರ್ವಜರು ಮತ್ತು ಕುಟುಂಬ ಸದಸ್ಯರ ಆಶೀರ್ವಾದ ನನ್ನ ಮೇಲಿದೆ. ರಾಮಲಲ್ಲಾನ ಆಶೀರ್ವಾದದಿಂದ ಇದೆಲ್ಲಾ ಸಾಧ್ಯವಾಗಿದೆ. ನನಗೆ ಅನ್ನಿಸುತ್ತದೆ ನಾನು ಡ್ರೀಮ್ ಬಾಯ್ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.