ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ನರೇಂದ್ರ ಮೋದಿಯವರನ್ನು ಸೋಲಿಸಲೇಬೇಕೆಂದು ವಿಪಕ್ಷಗಳೆಲ್ಲ ನಿರ್ಧಾರ ಮಾಡಿವೆ. ಇಂದು ಲೋಕಸಭಾ ಕಲಾಪದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿವೆ. ಮೋದಿಯನ್ನು ಮಣಿಸಲು ಅವಿಶ್ವಾಸ ನಿರ್ಣಯ ಮಂಡಿಸಲು ಯೋಜನೆ ರೂಪಿಸಿವೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಲೋಕಸಭೆಗೆ ಹೋಗುವ ಮುನ್ನ ಕಾಂಗ್ರೆಸ್ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಾಗಲಿದೆ. ಬಳಿಕ ಲೋಕಸಭೆಯಲ್ಲಿ ಅವಿಶ್ವಾಸ ಮಂಡನೆಯ ಕೂಗು ಕೇಳಲಿದೆ.
ಈ ಹಿಂದೆ ಕೂಡ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. 2018ರಲ್ಲಿ ಟಿಡಿಪಿ ಪಕ್ಷ ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು. ಈಗ 2023ರಲ್ಲಿ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧಾರ ಮಾಡಲಾಗಿದೆ. ಆದರೆ ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರುವ ಹಿನ್ನೆಲೆ ಸರ್ಕಾರ ಪತನ ಅಷ್ಟು ಸುಲಭವಲ್ಲ.