ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮಂಡ್ಯದಲ್ಲಿ ಜನತಾ ದರ್ಶನ ನಡೆಸಿದ್ದಾರೆ. ಆದರೆ ಈ ಜನಾತಾ ದರ್ಶನಕ್ಕೆ ಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಯಾವ ಅಧಿಕಾರಿಯೂ ಹಾಜರಾಗಿರಲಿಲ್ಲ. ಎಲ್ಲರೂ ಗೈರಾಗಿದ್ದರು. ಹೀಗಾಗಿ ದ್ವೇಷದ ರಾಜಕಾರಣ ನಡೀತಾ ಇದ್ಯಾ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಎಲ್ಲಾ ಅಧಿಕಾರಿಗಳಿಗೆ ಮೌಖಿಕ ಸಂದೇಶ ಹೋಗಿದೆ ಎನ್ನಲಾಗಿದೆ. ಕುಮಾರಸ್ವಾಮಿ ನಡೆಸುತ್ತಿರುವ ಜನತಾ ದರ್ಶನ ಸರ್ಕಾರದ ಕಾರ್ಯಕ್ರಮವಲ್ಲ. ಕೇಂದ್ರ ಸಚಿವರು ಜನಾತ ದರ್ಶನ ನಡೆಸುವುದಕ್ಕೆ ಸರ್ಕಾರದಲ್ಲಿ ಅವಕಾಶವಿಲ್ಲ. ಸಿಎಂ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಮಂಡ್ಯ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳು ಗೈರಾಗಿದ್ದಕ್ಕೆ ತರಾಟೆ ತೆಗೆದುಕೊಂಡ ಕುಮಾರಸ್ವಾಮಿ, ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವೂ ಅಧಿಕಾರಿಗಳನ್ನು ದೂರವಿಡಬಹುದು. ಆದರೆ ನನ್ನಿಂದ ಜನರನ್ನು ದೂರ ಇಡಲು ಸಾಧ್ಯವಿಲ್ಲ ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ. ಅಧಿಕಾರಿಗಳನ್ನು ದೂಷಿಸಲ್ಲ, ಸರ್ಕಾರ ಸಣ್ಣತನ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೂಡಾ ಸೈಟ್ ಗಳನ್ನು ವಾಪಾಸ್ ತೆಗೆದುಕೊಂಡು ಜಮೀನಿಗೆ ಮಾರುಕಟ್ಟೆ ಬೆಲೆಯಲ್ಲಿ 62 ಕೋಟಿ ಕೊಡಲಿ ಎಂಬ ಸಿಎಂ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ಮೂಡಾ 62 ಕೋಟಿ ಕೊಡಲಿ ಅಂತ ಅಷ್ಟು ಸುಲಭವಾಗಿ ಹೇಳುತ್ತಾರೆ. ರೈತರ ಜಮೀನುಗಳನ್ನ ಹಲವು ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಿರುವ ಸರ್ಕಾರ ಮಾರುಕಟ್ಟೆ ಬೆಲೆಯನ್ನೇ ಕೊಟ್ಟಿದೆಯಾ..? ಅಮಾಯಕ ರೈತರು ತಮ್ಮ ಜಮೀನಿನ ಪರಿಹಾರ ಪಡೆಯಲು ಕೋರ್ಟು, ಕಚೇರಿ ಅಲೆದಾಡುತ್ತಾ ಚಪ್ಪಲಿ ಸವೆಸುತ್ತಾರೆ ಎಂದಿದ್ದಾರೆ.