ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ 2021 ಮುಗಿದು 2022 ಆರಂಭವಾಗುತ್ತಿದೆ. ಕಳೆದ ಎರಡು ವರ್ಷದಿಂದ ಯಾವುದೇ ಅದ್ದೂರಿ ಸೆಲೆಬ್ರೇಷನ್ ಇಲ್ಲದೆ ಪಾರ್ಟಿ ಪ್ರಿಯರು ಬೇಸರವಾಗಿದ್ದಾರೆ. ಈ ಬಾರಿಯಾದ್ರೂ ಸೆಲೆಬ್ರೇಷನ್ ಮಾಡಬಹುದು ಎಂಬ ಆಸೆ ಆಕಾಂಕ್ಷೆ ಇಟ್ಟುಕೊಂಡಿದ್ದವರಿಗೆ ಮತ್ತೆ ಕೊರೊನಾ ಭೀತಿ ಎದುರಾಗಿದೆ. ಸರ್ಕಾರದಿಂದ ಸೆಲೆಬ್ರೇಷನ್ ಗೆ ಬ್ರೇಕ್ ಬಿದ್ದಿದೆ.
ಡಿಸೆಂಬರ್ 28ರಿಂದಲೇ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಈ ವೇಳೆ ಕೆಲವೊಂದು ಕ್ಷೇತ್ರಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಕೆಲವೊಂದು ಕ್ಷೇತ್ರಕ್ಕೆ ರಿಯಾಯಿತಿ ನೀಡಲಾಗಿದೆ. ನೈಟ್ ಕರ್ಫ್ಯೂ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಇರಲಿದ್ದು, ಸೆಲೆಬ್ರೇಷನ್ ಮಾಡಲು ಅನುಮತಿ ಇಲ್ಲ. ಹಾಗಂತ ಪೂರ್ತಿಯಾಗಿ ನಿರ್ಬಂಧ ಹೇರಿಲ್ಲ. ಬಾರ್ ಆಂಡ್ ರೆಸ್ಟೋರೆಂಟ್ ಗಳಿಗೆ ಶೇಕಡ 50 ರಷ್ಟು ಅನುಮತಿ ನೀಡಲಾಗಿದೆ.
ಬಾರ್, ಪಬ್, ಕ್ಲಬ್ ಗಳಿಗೆ 50:50 ನಿಯಮ ನೀಡಲಾಗಿದೆ. ಇದು ಹಗಲು ಮತ್ತು ರಾತ್ರಿ ಎರಡಕ್ಕೂ ಅನ್ವಯವಾಗಲಿದೆ. ಸಭೆ, ಸಮಾರಂಭಗಳಿಗೆ 300ಕ್ಕೂ ಅಧಿಕ ಮಂದಿ ಸೇರುವ ಆಗಿಲ್ಲ. ಜನವರಿ 2ರವರೆಗೆ ಮಾತ್ರ ಈ 50:50 ನಿಯಮ ಜಾರಿಯಲ್ಲಿರಲಿದೆ.
ಇನ್ನು ಯಾವುದಕ್ಕೆಲ್ಲಾ ರಿಯಾಯಿತಿ ಅನ್ನೋದನ್ನ ನೋಡೋದಾದ್ರೆ ತುರ್ತು ಸೇವೆಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಕೆಲಸಕ್ಕೆ ಹೋಗುವವರು ಗುರುತಿನ ಚೀಟಿ ತೋರಿಸಬೇಕಾಗುತ್ತದೆ. ಸಾರಿಗೆ ಸಂಚಾರದಲ್ಲೂ ವ್ಯತ್ಯಾಸಗಳಾಗುವುದಿಲ್ಲ.