ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯ ಸರ್ಕಾರಕ್ಕೆ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲದೆ ಇದ್ದರೆ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದೇ ಹೇಳಿದ್ದಾರೆ.
ಇಂದು ನಿರಂಜನ ಹೀರೆಮಠ ಅವರ ಮನೆಗೆ ಭೇಟಿ ನೀಡಿದ ಬಸವರಾಜ್ ಬೊಮ್ಮಾಯಿ ಅವರು ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ನಿರಂಜನ ಕುಟುಂಬಕ್ಕೂ ನಮಗೂ ಹಳೆಯ ಸಂಬಂಧವಿದೆ. ಕಮಡೊಳ್ಳಿಯಲ್ಲಿ ನಿರಂಜನ ಹಿರಿಯರು ನಮ್ಮ ಕುಟುಂಬದ ಗುರುಗಳು. ನೇಹಾ ಹತ್ಯೆ ಬಹಳ ಆಘಾತಕಾರಿಯಾದಂತ ಸಂಗತಿ. ಅಮಾಯಕ ಹೆಣ್ಣು ಮಗುವನ್ನು ಕ್ರೂರವಾಗಿ ಕೊಲೆ ಮಾಡಿರುವುದು ತಲೆ ತಗ್ಗಿಸುವಂತ ಕೆಲಸ. ಕಾಂಗ್ರೆಸ್ ಇಡೀ ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಈ ಷಡ್ಯಂತ್ರದ ಹಿಂದೆ ಬಹಳಷ್ಟು ಜನ ಇದ್ದಾರೆ ಎಂದು ಈಗಾಗಲೇ ನೇಹಾ ತಂದೆ ತಾಯಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಸಮಗ್ರ ತನಿಖೆಯಾಗಬೇಕಾದರೆ ಸಿಬಿಐಗೆ ನೀಡಬೇಕು. ಇದು ಅವರ ಕುಟುಂಬಸ್ಥರ ಆಗ್ರಹ ಕೂಡ. ಆದರೆ ರಾಜ್ಯ ಸರ್ಕಾರ ಸಿಐಡಿಗೆ ಕೊಟ್ಟು ಕೈ ತೊಳೆದುಕೊಂಡಿದೆ. ಈ ಪ್ರಕರಣದಲ್ಲಿ ಏನನ್ನು ಮುಚ್ಚಿಡಬಾರದು. ಯಾರನ್ನೂ ರಕ್ಷಿಸಬಾರದು ಎಂಬ ಮನೋಭಾವ ರಾಜ್ಯ ಸರ್ಕಾರಕ್ಕೆ ಇದ್ದರೆ ಪ್ರಕರಣವನ್ನು ಕೂಡಲೇ ಸಿಬಿಐಗೆ ಕೊಡಬೇಕು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.