ಬೆಂಗಳೂರು: ಶಾಸಕ ಮುನಿರತ್ನ ಅವರನ್ನ ಪೊಲೀಸರು ಬಂಧಿಸಿದ್ದಾರೆ. ದಲಿತರು ಹಾಗೂ ಒಕ್ಕಲಿಗರ ವಿರುದ್ಧ ತೀರಾ ಕೆಟ್ಟದಾಗಿ ಮಾತನಾಡಿರುವ ಮುನಿರತ್ನ ವಿರುದ್ಧ ಸೂಕ್ತ ಕ್ರಮಕ್ಕೆ ಸಚಿವರು ಹಾಗೂ ಶಾಸಕರ ನಿಯೋಗ ಒತ್ತಾಯಿಸಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಕಾವೇರಿ ನಿವಾಸದಲ್ಲಿ ಭೇಟಿಯಾಗಿದೆ. ಸಚಿವರಾದ ಚೆಲುವರಾಯಸ್ವಾಮಿ, ಎಂ.ಸಿ.ಸುಧಾಕರ್, ಶರತ್ ಬಚ್ಚೇಗೌಡ, ಮಾಗಡಿ ಬಾಲಕೃಷ್ಣ, ಮಾಲೂರು ಮಂಜೇಗೌಡ, ಕುಣಿಗಲ್ ರಂಗನಾಥ್ ಎಸ್.ರವಿ ಸೇರಿದಂತೆ ಇನ್ನಿತರರು ಜೊತೆಗೂಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಕೂಡ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮನವಿಯ ಬಳಿಕ ಮಾತನಾಡಿದ ಸಚಿವ ಎಂಸಿ ಸುಧಾಕರ್, ಕಾಂಗ್ರೆಸ್ ನ ಒಕ್ಕಲಿಗ ಸಮುದಾಯದ ಶಾಸಕರು, ಸಚಿವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ. ಮುನಿರತ್ನ ಅವರು ಮಾತನಾಡಿರುವ ಆಡಿಯೋ ಬಂದಿದೆ. ಅದರಲ್ಲಿ ಒಕ್ಕಲಿಗರ ಹಾಗೂ ದಲಿತರ ಕುರಿತಾಗಿ ಮಾತನಾಡಿರುವುದು ಖಂಡನೀಯ.
ಅವರ ಮಾತುಗಳು ಬಹಳ ನೋವುಂಟು ಮಾಡಿವೆ. ಸರ್ಕಾರ ಈಗಾಗಲೇ ಅವರನ್ನು ಬಂಧಿಸಿದೆ. ಈಗ ಒಂದು ಆಡಿಯೋ ಮಾತ್ರ ಬೆಳಕಿಗೆ ಬಂದಿದೆ. ಆದರೆ ಈ ಹಿಂದೆ ಹಲವು ಬಾರಿ ಈ ರೀತಿ ಮಾತನಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿಎಂ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಮುನಿರತ್ನ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಇದಕ್ಕೆ ಉತ್ತಮ ರೆಸ್ಪಾನ್ಸ್ ಮಾಡಿದ್ದಾರೆ. ಬಿಜೆಪಿ ಅವರು ಏನು ಬೇಕಾದರೂ ಮಾಡುತ್ತಾರೆ. ಈ ಹಿಂದೆ ದೇಶದ ಪ್ರಧಾನಿಗಳೇ ಆರ್ ಆರ್ ನಗರದಲ್ಲಿ ನಕಲಿ ಮತದ ಬಗ್ಗೆ ಮಾತನಾಡಿದ್ದರು. ಈಗ ಅವರು ಬಿಜೆಪಿಗೆ ಸೇರಿದ ಮೇಲೆ ಎಲ್ಲಾ ಆರೋಪಗಳಿಂದ ಮುಕ್ತವಾಗಿದ್ದಾರೆ ಎಂದಿದ್ದಾರೆ.