ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.ಡಿ.29: ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ಕಾಮಗಾರಿಗೆ ಸಂಬಂಧಪಟ್ಟಂತೆ ತಕ್ಷಣವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಒಂದು ತಿಂಗಳೊಳಗೆ ಅನುದಾನ ವೆಚ್ಚ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ 2022-23ನೇ ಸಾಲಿನ ನವೆಂಬರ್-2022ರ ಮಾಹೆಯ ಅಂತ್ಯಕ್ಕೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ತ್ವರಿತಗತಿಯಲ್ಲಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಒಂದು ತಿಂಗಳೊಳಗೆ ಬಾಕಿ ಉಳಿದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.
ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ವೈಯಕ್ತಿಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹತೆ ಹಾಗೂ ಮಾನದಂಡದ ಪ್ರಕಾರವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಟೆಂಡರ್ ನಿಬಂಧನೆಗಳ ಪ್ರಕಾರ ಗುಣಮಟ್ಟದ ಸಾಮಾಗ್ರಿಗಳನ್ನೇ ಖರೀದಿ ಮಾಡಬೇಕು. ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವಂತಿಲ್ಲ. ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದರೆ ಹಣದ ದುರಪಯೋಗದಡಿ ಪ್ರಕರಣ ದಾಖಲಿಸಿ, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮಕೈಗೊಳ್ಳಲಾಗುವುದು. ಹಾಗಾಗಿ ಯಾವುದೇ ಲೋಪದೋಷಗಳು, ದೂರುಗಳು ಬಾರದಂತೆ ಅಧಿಕಾರಿಗಳು ಕ್ರಮವಹಿಸಬೇಕು ಸೂಚನೆ ನೀಡಿದರು.
ಸರಿಯಾದ ಮಾಹಿತಿ ಒದಗಿಸಲು ಸೂಚನೆ: ಎಸ್‍ಪಿಪಿ, ಟಿಎಸ್‍ಪಿ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ಕುರಿತು ಸಮರ್ಪಕ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಸಭೆಗೆ ತಪ್ಪು ಮಾಹಿತಿ ನೀಡಬಾರದು. ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳು ನಿರ್ಲಕ್ಷೆ ಮಾಡುವಂತಿಲ್ಲ. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟಂತೆ ವಾರದೊಳಗೆ ಸರಿಯಾದ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಮುಖ್ಯ ಯೋಜನಾಧಿಕಾರಿ ಗಾಯತ್ರಿದೇವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.