ಬೆಂಗಳೂರು: ಜೆಡಿಎಸ್ ತೊರೆದಿರುವ ಬಸವರಾಜ್ ಹೊರಟ್ಟಿ ನಾಳೆ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಈ ಹಿನ್ನೆಲೆ ಹೊರಟ್ಟಿಯವರು ತಮ್ಮ ಜಾತ್ಯಾತೀತ ತತ್ವ ಸಿದ್ಧಾಂತಗಳನ್ನು ಬಿಟ್ಟು ಬಿಟ್ಟರಾ ಎಂಬ ಚರ್ಚೆಗಳು ಶುರುವಾಗಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಹೊರಟ್ಟಿಯವರು, ಅಧಿಕಾರ ಏನಿದೆ..? ಅಧಿಕಾರವೆಲ್ಲ ಹೋಗಿದೆ. ಈಗ ಎಂಎಲ್ಸಿ ಆಗಿದ್ದೀನಿ. ಬಿಜೆಪಿಯಿಂದ ನಿಂತರೂ ಆಗ್ತೀನಿ, ಯಾವ ಪಕ್ಷದಿಂದ ನಿಂತರೂ ಆಗೇ ಆಗ್ತೀನಿ. ಅದ್ರಲ್ಲಿ ಅಧಿಕಾರ ಅಂತದ್ದೇನು ಇಲ್ಲ ಎಂದಿದ್ದಾರೆ.
ನನ್ನ ಭವಿಷ್ಯದ ಬಗ್ಗೆ ಯಾರು ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಅವಾಗಿನಿಂದ 31 ವರ್ಷ ಇದ್ದವನಿಂದ ಈಗ 72 ವರ್ಷ ಇಲ್ಲಿ ತನಕ ಬಂದಿದ್ದೀನಿ. ನನಗೆ ಯಾವುದೇ ಬೇಸರವಿರುವುದಿಲ್ಲ. ನಾನು ಒಬ್ಬ ಸಾಮಾನ್ಯ ಮನೆತನದಲ್ಲಿ ಹುಟ್ಟಿ ಒಬ್ಬ ಸಾಮಾನ್ಯ ಶಿಕ್ಷಕನಾಗಿ ಇಷ್ಟೊಂದು ವರ್ಷ ಬಂದು, ಮಂತ್ರಿಯಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದೇನೆ. ಇದಕ್ಕಿಂತ ಇನ್ನೇನು ಬೇಕು. ಇದಕ್ಕಿಂತ ಅಧಿಕಾರ ಬೇಕಾ..? ಎಂದಿದ್ದಾರೆ.
ಒಮ್ಮೊಮ್ಮೆ ಆಕಸ್ಮಿಕವಾದ ಬದಲಾವಣೆಗಳು ಆಗುತ್ತವೆ. ನಮ್ಮಲ್ಲಿ ಕೆಲವು ಸ್ನೇಹಿತರು, ಆತ್ಮೀಯರು ಬಂದು ಬಹಳಷ್ಟು ಹೇಳಿದ್ದಾರೆ. ಈ ಸಲ ಹೀಗೆ ನಿಲ್ಲಬೇಕು, ಒಂದು ಸಲ ನೀವೂ ಬರಲಿಲ್ಲ. ಈ ಸಲ ನೀವೂ ಬರಲೇಬೇಕು ಎಂದಿದ್ದಾರೆ. ಎರಡ್ಮೂರು ತಿಂಗಳಿನಿಂದ ಅದು ನಡೆದಿತ್ತು. ಕೆಲವೊಮ್ಮೆ ಆಕಸ್ಮಿಕವಾಗಿ ಬದಲಾವಣೆಗಳು ಆಗುತ್ತವೆ. ಅಂತ ಬದಲಾವಣೆಗಳಾದಾಗ ಅನಿವಾರ್ಯವಾಗಿ ಆ ಒಂದು ಬದಲಾವಣೆಗೆ ನಾನು ಹೊಂದಿಕೊಂಡಿದ್ದೇನೆ ಎಂದು ಜೆಡಿಎಸ್ ತೊರೆಯುತ್ತಿರುವ ಬಗ್ಗೆ ಬಸವರಾಜ್ ಹೊರಟ್ಟಿ ಮಾತನಾಡಿದ್ದಾರೆ.