ಚಿತ್ರದುರ್ಗ: ಪಠ್ಯ ಪರಿಷ್ಕರಣೆ ಬಳಿಕ ಸಾಕಷ್ಟು ವಿವಾದ ಎದ್ದಿದ್ದು, ಹೆಡ್ಗೇವಾರ್ ಪಠ್ಯ ಸೇರ್ಪಡೆಗೂ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಸಚುವ ಎ ನಾರಾಯಣಸ್ವಾಮಿ, ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಪಠ್ಯಕ್ಕೆ ವಿರೋಧ ವ್ಯಕ್ತಪಡಿಸುವ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟಗಾರರೇ ಎಂದು ಪ್ರಶ್ನಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯದ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಲು ಅನ್ಯ ಮಾರ್ಗ ತುಳಿಯುತ್ತಿದೆ. ಈ ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಇದೆ. ಹಿಂದುಳಿದ ವರ್ಗದ ನಾಯಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವನ್ನು ಜಾತಿ ಆಧಾರದ ಮೇರೆಗೆ ಇಬ್ಬಾಗ ಮಾಡಿದ್ದರು ಎಂದಿದ್ದಾರೆ.
ಪ್ರವಾಸದ ನೆಪದಲ್ಲಿ ಮಕ್ಕಳಲ್ಲಿ ತಾರತಮ್ಯ ಮಾಡಿಸಿದ್ದರು. ಆಗ ಅಶಾಂತಿ ಸೃಷ್ಟಿಯಾಗಿರಲಿಲ್ಲವೇ. ಕುರುಬ ಸಮುದಾಯದ ಪರಿಶಿಷ್ಟ ಪಂಗಡದ ಬೇಡಿಕೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಆಡಿದ ಮಾತುಗಳು ಸರಿ ಇಲ್ಲ ಎಂದಿದ್ದಾರೆ.