ಚಿತ್ರದುರ್ಗ : ಬಿಜೆಪಿ ಎಸ್ಟಿ ಮೋರ್ಚಾದಿಂದ ಜೂ.3 ರಂದು ಚಿತ್ರದುರ್ಗದಿಂದ ಆರಂಭವಾಗಬೇಕಿದ್ದ ಮದಕರಿನಾಯಕನ ರಥಯಾತ್ರೆ ಹಾಗೂ ಬುಡಕಟ್ಟು ಉತ್ಸವವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಎಸ್ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ ಹೇಳಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ. ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ ಹವಾಲ್ದಾರ್‌ರವರು ಜೂ.3 ರಂದು ಕೋಟೆ ಮುಂಭಾಗ ಮದಕರಿನಾಯಕನ ಉತ್ಸವ ಹಾಗೂ ಬುಡಕಟ್ಟು ಉತ್ಸವಕ್ಕೆ ಚಾಲನೆ ನೀಡುವುದಾಗಿ ಚಿತ್ರದುರ್ಗದ ಬಿಜೆಪಿ.ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದ್ದರು. ಆದರೆ ನಾಯಕ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಪ್ರಸನ್ನಾನಂದಸ್ವಾಮಿಗಳು 112 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿರುವ ಈ ಸಂದರ್ಭದಲ್ಲಿ ಮದಕರಿನಾಯಕನ ಉತ್ಸವ ಹಾಗೂ ಬುಡಕಟ್ಟು ಉತ್ಸವ ನಡೆಸುವುದು ಸಮಂಜಸವಲ್ಲ ಎನ್ನುವ ಕಾರಣಕ್ಕಾಗಿ ರಥೋತ್ಸವ ಹಾಗೂ ಬುಡಕಟ್ಟು ಉತ್ಸವವನ್ನು ಮುಂದೂಡಿದ್ದು, ಸರ್ಕಾರ ಮೀಸಲಾತಿಯನ್ನು ಘೋಷಿಸಿದ ನಂತರ ಮದಕರಿನಾಯಕನ ರಥೋತ್ಸವ ಹಾಗೂ ಬುಡಕಟ್ಟು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ನೂತನ ಸದಸ್ಯ ಪಾಪೇಶನಾಯಕ ಮಾತನಾಡಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮುದಾಯದ ಹದಿನೈದು ಶಾಸಕರ ನಿಯೋಗ ಹೋಗಿದ್ದರ ಪರಿಣಾಮವಾಗಿ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಘೋಷಿಸಿತು. ಶೇ.7.5 ಮೀಸಲಾತಿಗಾಗಿ ನಮ್ಮ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ನವೆಂಬರ್ ಒಳಗೆ ಸರ್ಕಾರ ಮೀಸಲಾತಿಯನ್ನು ನೀಡಲಿದೆ ಎಂದು ಸಚಿವ ಶ್ರೀರಾಮುಲು ಭರವಸೆ ನೀಡಿದ್ದರಿಂದ ಮದಕರಿನಾಯಕ ರಥೋತ್ಸವ ಹಾಗೂ ಬುಡಕಟ್ಟು ಉತ್ಸವವನ್ನು ಮುಂದೂಡಲಾಗಿದೆ ಎಂದು ಹೇಳಿದರು.
ನಗರಸಭೆ ಸದಸ್ಯ ವೆಂಕಟೇಶ್ ಮಾತನಾಡುತ್ತ ಶೇ.7.5 ಮೀಸಲಾತಿಗಾಗಿ ನಮ್ಮ ಜನಾಂಗದ ಸ್ವಾಮೀಜಿ 112 ದಿನಗಳಿಂದ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದಾರೆ. ರಾಜ್ಯ ಸರ್ಕಾರ ಮೀಸಲಾತಿಯನ್ನು ಘೋಷಿಸಿದ ಮೇಲೆ ನಮ್ಮ ಸಮಾಜದ ಎಲ್ಲಾ ಮುಖಂಡರು ಹಾಗೂ ಜನಾಂಗದವರೊಡನೆ ಚರ್ಚಿಸಿ ಸ್ವಾಮೀಜಿ ನೇತೃತ್ವದಲ್ಲಿಯೇ ಮದಕರಿನಾಯಕ ಜಯಂತಿ ಹಾಗೂ ಬುಡಕಟ್ಟು ಉತ್ಸವವನ್ನು ಆಚರಿಸಲಾಗುವುದು ಎಂದರು.
ಸೋಮೇಂದ್ರ ಬೆಳಗಟ್ಟ ಮಾತನಾಡಿ ಶೇ.7.5 ಮೀಸಲಾತಿಗಾಗಿ ನಮ್ಮ ಸಮುದಾಯದ ಸ್ವಾಮೀಜಿ ಧರಣಿ ಕುಳಿತಿರುವ ಈ ಪರಿಸ್ಥಿತಿಯಲ್ಲಿ ಮದಕರಿನಾಯಕನ ರಥೋತ್ಸವ, ಬುಡಕಟ್ಟು ಉತ್ಸವವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ನಮ್ಮ ಜನಾಂಗದ ಯುವಕರು ಯಾರು ಸಾಮಾಜಿಕ ಜಾಲತಾಣಗಳಲ್ಲಿ ಮುಖಂಡರುಗಳನ್ನು ಅವಹೇಳನ ಮಾಡಬಾರದೆಂದು ವಿನಂತಿಸಿದರು.
ಬಿಜೆಪಿ. ಎಸ್ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಎನ್.ಎಲ್. ನಾಯಕನಹಟ್ಟಿ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಸಿ.ಬಿ.ಮೋಹನ್, ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದ್, ಎಸ್.ಟಿ.ಮೋರ್ಚಾ ಚಿತ್ರದುರ್ಗ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್ ಟಿ.ಎಸ್. ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.